ಕಲಬುರುಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿಣಮಗೇರಾ ಸರಕಾರಿ ಶಾಲಾ ಬಿಸಿಯೂಟದ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿರುವ ಎರಡನೇ ತರಗತಿ ವಿದ್ಯಾರ್ಥಿನಿ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತಪಟ್ಟ ವಿದ್ಯಾರ್ಥಿನಿ ಮಹಾಂತಮ್ಮ(8) ಅವರ ತಾಯಿ ಸಂಗೀತಾ ಅವರು ನೀಡಿದ ದೂರಿನ ಮೇರೆಗೆ ದೇವಲಗಾಣಗಾಪುರ ಪೊಲೀಸರು ಶಾಲಾ ಮುಖ್ಯ ಶಿಕ್ಷಕಿ, ಅಡುಗೆ ಸಿಬ್ಬಂದಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಾಲೆಗೆ ಹೋಗಿದ್ದ ಮಗಳು ಸಾಂಬಾರ್ ನಲ್ಲಿ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಮಹಾಂತಮ್ಮ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದಕ್ಕೆಲ್ಲ ಬಿಸಿಯೂಟದ ಸಿಬ್ಬಂದಿಯೇ ಕಾರಣ ಎಂದು ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


