ಖಾಸಗಿ ಶಾಲಾ ಬಸ್ ಗೆ ಟ್ಯಾಂಕರ್ ವಾಹನವು ಡಿಕ್ಕಿ ಹೊಡೆದ ಪರಿಣಾಮ ಶಾಲಾ ಮಕ್ಕಳಿದ್ದ ಬಸ್ ಉರುಳಿ ಬಿದ್ದ ಘಟನೆ ಮೈಸೂರಿನ ಸಾಲಿಗ್ರಾಮ- ಭೇರ್ಯ ಹೆದ್ದಾರಿಯಲ್ಲಿ ಬರುವ ಕುರುಬಹಳ್ಳಿ ಗೇಟ್ ಬಳಿ ನಡೆದಿದೆ. ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಸಿಇಟಿ ಖಾಸಗಿ ಶಾಲೆಗೆ ಸೇರಿ ಮಿನಿ ಬಸ್ ಇದಾಗಿದೆ.
ಟ್ಯಾಂಕರ್ ವಾಹನವು ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ತೆರಳುತ್ತಿತ್ತು. ಕುರುಬಹಳ್ಳಿ ಗ್ರಾಮದಿಂದ ಇದೇ ಮಾರ್ಗವಾಗಿ ಶಾಲಾ ಮಕ್ಕಳಿದ್ದ ಮಿನಿ ಬಸ್ ಮಿರ್ಲೆ ಗ್ರಾಮಕ್ಕೆ ಹೋಗುತ್ತಿತ್ತು. ಕುರುಬಹಳ್ಳಿ ಗೇಟ್ ಬಳಿ ಏಕಾಏಕಿ ಶಾಲಾ ಮಕ್ಕಳಿರುವ ಮಿನಿ ಬಸ್‌ಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಯಲ್ಲಿ ಮಿನಿ ಬಸ್ ಉರುಳಿ ಬಿದ್ದಿದೆ.
ಶಾಲಾ ಬಸ್ ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ. ಬಸ್ ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಯಗೊಂಡ ಮಕ್ಕಳನ್ನು ರವಾನಿಸಲಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


