ಸರಗೂರು: ಸರಗೂರು ವಲಯ ವ್ಯಾಪ್ತಿಯ ಹಲಸೂರು ಗ್ರಾಮದ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಬಲಿ ತೆಗೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಗ್ರಾಮದ ಸೋಮಣ್ಣ ನಾಯಕ ಎಂಬುವರು ಜಮೀನಿನಲ್ಲಿ ಭಾನುವಾರ ಮೇಕೆಗಳನ್ನು ಮೇಯಿಸುತ್ತಿದ್ದಾಗ ನುಗು ಜಲಾಶಯದ ಕಾಡಿನಿಂದ ಹೊರಬಂದ ಹುಲಿ ಜಮೀನಿನಲ್ಲಿದ್ದ ಮೇಕೆಗಳ ಮೇಲೆ ಏಕಾಏಕಿ ದಾಳಿ ನಡೆಸಿದ ವೇಳೆ ಮೇಕೆ ಮೃತಪಟ್ಟಿವೆ. ಇದರಲ್ಲಿ ಮೇಕೆಯೊಂದನ್ನು ಅರ್ಥ ಭಾಗವನ್ನು ತಿಂದು, ಕಾಡಿನೊಳಗೆ ಎಳೆದುಕೊಂಡು ಹೋಗುವ ಸಂದರ್ಭದಲ್ಲಿ ಮೇಕೆಯನ್ನು ಮೇಯಿಸುತ್ತಿದ್ದ ರೈತರು ಕೂಗಾಡಿದ್ದಾರೆ. ಈ ವೇಳೆ ಮೇಕೆಯನ್ನು ಅಲ್ಲೇ ಬಿಟ್ಟು ಹೋಗಿದೆ ಎಂದು ರೈತ ಸೋಮಣ್ಣ ನಾಯಕ ತಿಳಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ಹಲಸೂರು ಟಿ.ಕುಮಾರ್ ಮಾತನಾಡಿ, ಮೇಕೆಗಳನ್ನು ಸಾಕಿ ಜೀವನ ನಡೆಸುತ್ತಿದ್ದ ಸೋಮಣ್ಣ ನಾಯಕ ಅವರಿಗೆ ಸುಮಾರು 60 ಸಾವಿರ ರೂ.ಗೂ ಅಧಿಕ ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಲು ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಲೂ ಮೀನಾಮೇಷ ಎಣಿಸುತ್ತಿದ್ದಾರೆ. ಕಳೆದ ತಿಂಗಳು ಜಾನುವಾರುಗಳ ಮೇಲೆಯೂ ಹುಲಿ ದಾಳಿ ಮಾಡಿತ್ತು. ಇದರಿಂದಾಗಿ ಗ್ರಾಮಸ್ಥರಲ್ಲಿಭಯದ ವಾತಾವರಣ ಸೃಷ್ಟಿಯಾಗಿದ್ದು, ಶಾಲಾ–ಕಾಲೇಜು ವಿದ್ಯಾರ್ಥಿಗಳೂ ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ಇದೆ. ಇದಲ್ಲದೆ ಸೋಮಣ್ಣ ನಾಯಕ ಅವರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



