ವರದಿ: ಮಂಜುಸ್ವಾಮಿ ಎಂ ಎನ್ ಕೊರಟಗೆರೆ
ಕೊರಟಗೆರೆ: ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಂದು ಕೊರತೆಯ ಸಭೆಯು ತಹಶೀಲ್ದಾರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಪ.ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಪ್ರತ್ಯೇಕ ಆದಾಯವನ್ನು ಮೀಸಲು ಇಡಲಾಗಿದೆ, ಎಂದು ಪ.ಪಂ ಮುಖ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ ಸಭೆಯಲ್ಲಿ ಸಂಪೂರ್ಣ ವರದಿಯನ್ನು ನೀಡುವಂತೆ ಪ.ಪಂ ಮುಖ್ಯಾಧಿಕಾರಿಗೆ ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ, ಹೈಮಾಸ್ಕ್ ದೀಪದ ಸಂಪೂರ್ಣ ಮಾಹಿತಿಯನ್ನು ಕಡ್ಡಾಯವಾಗಿ ಶನಿವಾರ ನೀಡುವಂತೆ ಕೆಆರ್‍ಡಿಎಲ್ ಇಲಾಖೆಗೆ ಸೂಚಿಸಿದ್ದೇನೆ, ಕಂದಾಯ ಇಲಾಖೆಯ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾ.ಪಂ ಅಧಿಕಾರಿಗಳು ಡಿ.21ರಂದು ದಾಸರಹಳ್ಳಿ ಗ್ರಾಮದ ಸ್ಮಶಾನ ಭೂಮಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಸ್ಮಶಾನ ಜಾಗ ಒತ್ತುವಾರಿಯಾಗಿರುವುದು ಕಂಡು ಬಂದಿದೆ ಜ.1ರಂದು ಒತ್ತುವರಿಯಾದ ಸ್ಮಶಾನ ಜಾಗವನ್ನು ತೆರವು ಕಾರ್ಯಾಚರಣೆ ಮಾಡಲಾಗುವುದು ಜೊತೆಗೆ ಎಂದು ಹೇಳಿದರು.
ಹೊಳವನಹಳ್ಳಿ ಹೋಬಳಿ ಬಿ.ಡಿ ಪುರ ಗ್ರಾಮದಲ್ಲಿ ಸ.ನಂ.73ರಲ್ಲಿ 1 ಎಕರೆ ಸಾರ್ವಜನಿಕ ರುದ್ರಭೂಮಿ ಇದೆ, ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಪ್ರತ್ಯೇಕ ಸ್ಮಶಾನ ಮಂಜೂರು ಮಾಡಲು ಅವಕಾಶವಿಲ್ಲ, ಇದರಲ್ಲಿ 13 ಗುಂಟೆ ಒತ್ತುವರಿಯಾಗಿದೆ ಜ.6ರಂದು ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಒಟ್ಟು ಈಗಾಗಲೇ 61 ಪ್ರತ್ಯೇಕ ಸ್ಮಶಾನ ಮೀಸಲು ಇರಿಸಿದ ಸ್ಮಶಾನಗಳಿವೆ, ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿಯ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತೆಗೆದುಕೊಳ್ಳಬಹುದು, ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿಯ ಇದರ ಹಣ ಸ್ಮಶಾನದ ಅಭಿವೃದ್ಧಿಗೆ ಬಳಸದೆ ಇತರೆ ಸಾಮಾನ್ಯದ ಹಣವನ್ನು ಬಳಸುವಂತೆ ಪ.ಪಂ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ರೀತಿಯ ಜನಾಂಗದವರು ರಸ್ತೆಯ ಅಂಗಡಿ ಮಳಿಗೆಗಳಲ್ಲಿ ಮತ್ತು ಮನೆಗಳಲ್ಲಿ ಅಕ್ರಮವಾಗಿ ಮಧ್ಯಪಾನವನ್ನು ಮಾರಾಟ ಮಾಡುತ್ತಾರೆ, ಆದರೆ ಅಬಕಾರಿ ಇಲಾಖೆಯವರು ಪರಿಶಿಷ್ಟ ಜಾತಿಯವರನ್ನೇ ಟಾರ್ಗೇಟ್ ಮಾಡಿ ದಂಡ ಹಾಕುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪ ಮಾಡಿದ್ದಾರೆ, ಅಬಕಾರಿ ಇಲಾಖೆಯ ವಿರುದ್ಧ ಸಭೆಯಲ್ಲಿ ಹೆಚ್ಚಿನ ಆರೋಪಗಳು ಕೇಳಿ ಬಂದಿವೆ, ಪ್ರತಿ ತಿಂಗಳು ಅಕ್ರಮ ಮಧ್ಯಪಾನದ ದಂಡ ವಸೂಲಿಯ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಎಂದರು.
ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಡಿ.26ರಂದು ಯುವನಿಧಿಗೆ ಚಾಲನೆ ನೀಡಿದ್ದಾರೆ, 2022-23ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಪದವಿಧರ, ಡಿಪ್ಲೋಮೊ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉದ್ಯೋಗ ಸೃಷ್ಟಿಸಿಕೊಳ್ಳುವವರೆಗೆ ಸಹಾಯ ಧನ ಬರಲಿದೆ ಅರ್ಹ ಫಲಾನುಭವಿಗಳು ಇಂದೇ ಅರ್ಜಿ ಹಾಕಿ ಸೌಲಭ್ಯವನ್ನು ಪಡೆದುಕೊಳ್ಳಿ ಎಂದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಸರ್ಕಾರವು ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಪ್ರತ್ಯೇಕ ಸ್ಮಶಾನ ಮಂಜೂರು ಮಾಡಬೇಕು. ಏಕೆಂದರೆ, ದಲಿತ ಜನಾಂಗದವರನ್ನು ಸಮಾಜವು ಇಂದಿಗೂ ಅಸ್ಪøಶರಂತೆ ಕಾಣುತ್ತಿದೆ. ಈಗಲು ಸಹ ಅನೇಕ ದೇವಾಲಯಗಳಲ್ಲಿ ನಮ್ಮ ಜನಾಂಗ ದವರಿಗೆ ಪ್ರವೇಶವಿಲ್ಲ, ಆದ್ದರಿಂದ ಜಾತಿ ಪದ್ಧತಿ ಹೋಗುವವರೆಗೆ ದಲಿತರಿಗೆ ಪ್ರತ್ಯೇಕ ಸ್ಮಶಾನ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ಸಮುದಾಯದ ಮಕ್ಕಳು ಯುಪಿಎಸ್ಸಿ, ಕೆಎಎಸ್, ಐಎಎಸ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ತೆಗೆದುಕೊಳ್ಳುವಂತಿದ್ದರೆ ಸರ್ಕಾರವೇ ಅದರ ವೆಚ್ಚವನ್ನು ಭರಿಸಿ 10 ತಿಂಗಳವರೆಗೆ ಉಚಿತವಾಗಿ ತರಬೇತಿ ನೀಡುತ್ತಿದೆ, ಎಸ್ಸಿ/ಎಸ್ಟಿ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ, ಓಬಿಸಿ ಜನಾಂಗಕ್ಕೆ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು, ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್‍ನಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ ಇಂತಹ ಸೌಲಭ್ಯಗಳು ಸಿಕ್ಕಲ್ಲಿ ಯುವ ಜನತೆ ಕೂಡಲೇ ಬಳಸಿಕೊಳ್ಳಬೇಕು ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ನರಸಿಂಹಮೂರ್ತಿ, ತಾ.ಪಂ ಇಓ ಅಪೂರ್ವ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಯಮುನಾ, ಪಿಎಸ್‍ಐ ಚೇತನ್‍ಕುಮಾರ್, ಪರಿಶಿಷ್ಟ ಜಾತಿಯ ಚಿಕ್ಕರಂಗಯ್ಯ, ಸಿದ್ದಪ್ಪ, ದೊಡ್ಡಯ್ಯ, ಮಂಜುನಾಥ್, ಸುರೇಶ್, ಶಿವರಾಂ, ಗಿರಿನಗರ ನಾಗರಾಜು, ವಿನಯ್, ನಂದೀಶ್, ನವೀನ್, ನಾಗೇಶ, ಪರಿಶಿಷ್ಟ ವರ್ಗದ ಓಬಳರಾಜು, ಮಂಜುನಾಥ್, ವಿನಯ್, ಮಹೇಶ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.