ಮಹಾರಾಷ್ಟ್ರದ ನಾಗಪುರದಲ್ಲಿ ಇತ್ತೀಚೆಗೆ ನಡೆದಿದ್ದ 82 ವರ್ಷದ ಉದ್ಯಮಿಯ ಹಿಟ್ ಆಂಡ್ ರನ್ ಸಾವಿನ ಪ್ರಕರಣ ರೋಚಕ ತಿರುವು ಪಡೆದಿದೆ. ಸುಮಾರು 300 ಕೋಟಿ ರೂ ಮೌಲ್ಯದ ಕುಟುಂಬ ಆಸ್ತಿಗಾಗಿ ವೃದ್ಧನ ಸೊಸೆಯೇ ಅವರ ಕೊಲೆಗೆ ಸಂಚು ರೂಪಿಸಿದ್ದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಮೇ 22ರಂದು ಬಾಲಾಜಿ ನಗರಿಯಲ್ಲಿ ಕಾರು ಹರಿದು ಮಾವ ಪುರುಷೋತ್ತಮ್ ಪುಟ್ಟೇವರ್ ಮೃತಪಟ್ಟ ಪ್ರಕರಣದಲ್ಲಿ, ಪಟ್ಟಣ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿರುವ ಅರ್ಚನಾ ಮನೀಶ್ ಪುಟ್ಟೇವರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾವನಿಗೆ ಕಾರು ಡಿಕ್ಕಿ ಹೊಡೆಸಿ ಸಾಯಿಸಲು ಅರ್ಚನಾ ಅವರು ಬಾಡಿಗೆ ಜನರನ್ನು ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. “ಮಾವನನ್ನು ಕೊಲ್ಲಲು ಬಳಸಿದ ಹಳೆಯ ಕಾರನ್ನು ಖರೀದಿಸುವುದಕ್ಕಾಗಿ ಆರೋಪಿಗಳಿಗೆ ಆಕೆ ಹಣ ನೀಡಿದ್ದರು. ಕೊಲೆಯನ್ನು ಅಪಘಾತದ ರೀತಿ ಬಿಂಬಿಸುವುದು ಆಕೆಯ ಉದ್ದೇಶವಾಗಿತ್ತು. ಇದು ಅವರ 300 ಕೋಟಿ ರೂ ಮೌಲ್ಯದ ಆಸ್ತಿ ಮೇಲೆ ನಿಯಂತ್ರಣ ಸಾಧಿಸಲು ನಡೆಸಿದ ಕೃತ್ಯ ಎನ್ನುವುದು ಸ್ಪಷ್ಟವಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಮ್ಮ ಪತಿ ಮನೀಶ್ ಪುಟ್ಟೇವರ್ ಅವರ ಕಾರು ಚಾಲಕ ಬಾಗ್ಡೆ ಹಾಗೂ ಇತರೆ ಇಬ್ಬರು ಆರೋಪಿಗಳಾದ ನೀರಜ್ ನಿಮ್ಜೆ ಮತ್ತು ಸಚಿನ್ ಧಾರ್ಮಿಕ್ ಎಂಬುವವರ ಜತೆಗೂಡಿ 53 ವರ್ಷದ ಅರ್ಚನಾ ಈ ಹತ್ಯೆಯ ಸಂಚು ರೂಪಿಸಿದ್ದರು ಎನ್ನಲಾಗಿದೆ. ಅವರ ವಿರುದ್ಧ ಕೊಲೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಎರಡು ಕಾರು, ಚಿನ್ನದ ಆಭರಣಗಳು ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆ ಪ್ರಕರಣದ ತನಿಖೆ ವೇಳೆ, ಪಟ್ಟಣ ಯೋಜನಾ ಇಲಾಖೆಯಲ್ಲಿ ಅರ್ಚನಾ ಎಸಗಿರುವ ಅಕ್ರಮಗಳು ಕೂಡ ಬೆಳಕಿಗೆ ಬಂದಿವೆ. ಅರ್ಚನಾ ವಿರುದ್ಧ ಅನೇಕ ದೂರುಗಳು ಸಲ್ಲಿಕೆಯಾಗಿದ್ದರೂ, ಅವರ ರಾಜಕೀಯ ನಂಟುಗಳ ಕಾರಣದಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA