‘ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಿದರೆ ಹಿಂದೂ, ಕ್ರೈಸ್ತ ಸಮುದಾಯಕ್ಕಿಂತ ಮುಸ್ಲಿಮರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಉಪಾಧ್ಯಾಯ ಹೇಳಿದರು.
ಸ್ಪಂದನ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಏಕರೂಪ ನಾಗರಿಕ (ಯುಸಿಸಿ) ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಯುಸಿಸಿ ಬಗ್ಗೆ ಪರ ಮತ್ತು ವಿರೋಧ ವ್ಯಕ್ತಪಡಿಸುತ್ತಿರುವ ಹಲವರಿಗೆ ಸಮರ್ಪಕ ಮಾಹಿತಿ ಇಲ್ಲ. ಈ ಸಂಹಿತೆ ಜಾರಿಯಾದರೆ ಹಿಂದೂಗಳು ಸೇರಿ ಎಲ್ಲರ ಮದುವೆ ನೋಂದಣಿ ಕಡ್ಡಾಯವಾಗಲಿದೆ. ಪಾರ್ಸಿ ಸಮುದಾಯದ ಮಹಿಳೆಯರು ಅನ್ಯ ಧರ್ಮಿಯರೊಂದಿಗೆ ಮದುವೆಯಾದರೂ ಸಹ ಆಸ್ತಿ ಹಕ್ಕು ದೊರೆಯಲಿದೆ. ಜತೆಗೆ ಮುಸ್ಲಿಂ ಮಹಿಳೆಯರಿಗೆ ಈ ಎಲ್ಲ ಹಕ್ಕುಗಳ ಜತೆಗೆ ಹೆಚ್ಚು ಪ್ರಯೋಜನವಾಗಲಿದೆ’ ಎಂದು ಪ್ರತಿಪಾದಿಸಿದರು.
‘ಭಾರತದ ನಾಗರಿಕತ್ವ ಪಡೆದುಕೊಳ್ಳಲು ಸ್ಪಷ್ಟ ವ್ಯಾಖ್ಯಾನ ರೂಪಿಸಬೇಕು. ಮತದಾನದ ಹಕ್ಕು ಪಡೆಯಬೇಕಾದರೆ ಸಂವಿಧಾನ ನಿಷ್ಠೆ ಪ್ರದರ್ಶಿಸುವ ಅರ್ಜಿ ತುಂಬಬೇಕು. ದೇಶದಲ್ಲಿ ಧರ್ಮದ ವಿಜಯವಾಗಬೇಕಾದರೆ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ, ಏಕಧರ್ಮ ಸಂಹಿತೆ, ಸಮಾನ ಜನಸಂಖ್ಯೆ ಸಂಹಿತೆ ಎಂಬ ಮೂರು ಕಾನೂನುಗಳನ್ನು ಜಾರಿಗೊಳಿಸಬೇಕು’ ಎಂದು ಸಲಹೆ ನೀಡಿದರು.
‘ಯುಸಿಸಿ ಜಾರಿಯಾದರೆ ಆಹಾರ ಪದ್ಧತಿ, ಉಡುಗೆ ತೊಡುಗೆ, ಭಾಷೆ, ಆಚಾರ ವಿಚಾರಗಳಿಗೆ ವೈವಿಧ್ಯಕ್ಕೆ ಧಕ್ಕೆ ಆಗುವುದಿಲ್ಲ. ವಿವಾಹ ಯೋಗ್ಯ ವಯಸ್ಸು, ಆಸ್ತಿ ಹಕ್ಕು, ವಿಚ್ಚೇದನ ಪ್ರಕ್ರಿಯೆ, ದತ್ತು ಅಧಿಕಾರ, ಪೋಷಕರ ರಕ್ಷಣೆ ಹಕ್ಕುಗಳು ಸಿಗುತ್ತವೆ’ ಎಂದರು.
ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ವಿ. ನಾಗರಾಜ್ ಮಾತನಾಡಿ, ‘ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಹಲವರಿಗೆ ಯುಸಿಸಿ ಜಾರಿಗೊಳಿಸಬೇಕೆಂಬ ಆಶಯವಿತ್ತು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಇದನ್ನು ಜಾರಿಗೊಳಿಸಬೇಕೆಂಬ ಆಸೆ ಇತ್ತು. ಆದರೆ, ಮತ ಬ್ಯಾಂಕ್‌ಗೆ ಹೆದರಿಕೊಂಡು ಯುಸಿಸಿಯನ್ನು ಜಾರಿಗೊಳಿಸಲಿಲ್ಲ. ಈ ಸಂಹಿತೆಗೆ ಯಾವುದೇ ಧಾರ್ಮಿಕ ಆಯಾಮಗಳಿಲ್ಲ’ ಎಂದು ಹೇಳಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್, ‘ಯುಸಿಸಿ ಸಂವಿಧಾನದ 44ರ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿದೆ. ಯುಸಿಸಿ ರೂಪಿಸಲು ಸರ್ಕಾರ ಪ್ರಯತ್ನ ಮಾಡುವುದನ್ನು ಸಂವಿಧಾನವೇ ಕಡ್ಡಾಯಗೊಳಿಸಿದೆ. ಮೂಲಭೂತ ಹಕ್ಕುಗಳು ಸಂವಿಧಾನದ ಮೂರನೇ ಭಾಗದಲ್ಲಿದ್ದರೆ, ಯುಸಿಸಿ ವಿಚಾರ ಸಂವಿಧಾನದ ನಿರ್ದೇಶನ ತತ್ವಗಳನ್ನು ಪ್ರತಿಪಾದಿಸುವ ನಾಲ್ಕನೇ ಭಾಗದಲ್ಲಿದೆ’ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


