ಕೆಲವೊಮ್ಮೆ ನಮ್ಮ ಗುಪ್ತ ಆರೋಗ್ಯ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳಲು ಇರಿಸು ಮುರಿಸು ಉಂಟಾಗುತ್ತದೆ. ಆದರೆ ಆಸ್ಪತ್ರೆ ಸಿಬ್ಬಂದಿಯೇ ರೋಗಿಯ ಚಿಕಿತ್ಸಾ ಕ್ರಮದ ಬಗ್ಗೆ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದರೆ ರೋಗಿಯ ಪರಿಸ್ಥಿತಿ ಹೇಗಾಗಿರಬಹುದು..? ಇಂಥದೊಂದು ಘಟನೆಗೊಂದು ಸಾಕ್ಷಿಯಾಗಿದೆ ಚೀನಾದ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆ.
ಚೀನಾದಲ್ಲಿ ಮಹಿಳೆಯೊಬ್ಬಳು ಸ್ತನ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಾಗಿ ಮಧ್ಯ ಚೀನಾದ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಗೆ ಜನವರಿಯಲ್ಲಿ ದಾಖಲಾಗಿದ್ದಳು. ತಿಂಗಳುಗಳ ನಂತರ, ಇತರ ಹಲವಾರು ಮಹಿಳೆಯರೊಂದಿಗೆ ತನ್ನ ವಿಡಿಯೊ ಚೀನಾದ ಸೋಶಿಯಲ್ ಮೀಡಿಯಾದ ಪ್ಲಾಟ್ ಫಾರ್ಮ್‍ನಲ್ಲಿ ಪ್ರಸಾರವಾಗುತ್ತಿರುವುದನ್ನು ಕಂಡು ಅವಳು ಶಾಕ್ ಆಗಿದ್ದಾಳೆ. ವಿಡಿಯೋದಲ್ಲಿ ಆಕೆಗೆ ಶಸ್ತ್ರಚಿಕಿತ್ಸೆಯ ನಂತರ, ಬ್ಯಾಂಡೇಜ್ ಮತ್ತು ಅರಿವಳಿಕೆಗೆ ನೀಡುವ ವಿಡಿಯೋ ವೈರಲ್ ಆಗಿತ್ತು.
ಈ ಘಟನೆಯ ಬಗ್ಗೆ ಬೇಸರಗೊಂಡ ಮಹಿಳೆ ತನ್ನ ಜೀವನದಲ್ಲಿ ರಹಸ್ಯವಾಗಿಡಬೇಕಾಗಿದ್ದ ಈ ವಿಚಾರವನ್ನು ಬಹಿರಂಗಪಡಿಸಿದ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ. ಅಲ್ಲದೇ ವಿಡಿಯೊ ಶೂಟ್ ಮಾಡಿದ ವ್ಯಕ್ತಿಯನ್ನು ಗುರುತಿಸಿ ಮತ್ತು ವಿಡಿಯೊವನ್ನು ಡಿಲೀಟ್ ಮಾಡುವಂತೆ ಆಕೆ ಆಸ್ಪತ್ರೆಯನ್ನು ಪದೇ ಪದೆ ಸಂಪರ್ಕಿಸಿದ್ದಾಳೆ. ಇಷ್ಟು ಮಾತ್ರವಲ್ಲದೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಪರಿಹಾರ ನೀಡುವಂತೆ ಆಕೆ ಆಸ್ಪತ್ರೆಯ ಅಧಿಕಾರಿಗಳನ್ನು ಕೇಳಿದ್ದಾಳೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಕ್ಷಮೆಯಾಚಿಸಲು ಹಾಗೂ ವಿಡಿಯೋ ಡಿಲೀಟ್ ಮಾಡಲು ನಿರಾಕರಿಸಿದ್ದಾರೆ. ಅಲ್ಲದೇ ವಿಡಿಯೋ ಮಾಡಿದವರನ್ನು ಪತ್ತೆಹಚ್ಚುವುದು ಅಸಾಧ್ಯ ಎಂದು ತಿಳಿಸಿದ ಬಗ್ಗೆ ವರದಿಯಾಗಿದೆ.
ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಬಗ್ಗೆ ಆಸ್ಪತ್ರೆಯವರಿಗೆ ತಿಳಿದಿದೆ. ಆಸ್ಪತ್ರೆಯ ಆಪರೇಟಿಂಗ್ ಥಿಯೇಟರ್ ನೊಳಗೆ ವೈದ್ಯರ ಅನುಮತಿ ಇಲ್ಲದೇ ಸಾಮಾನ್ಯ ಜನರಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಈ ವಿಡಿಯೋದಲ್ಲಿ ವೈದ್ಯರು ಮತ್ತು ನರ್ಸ್‍ಗಳಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದು ಆಸ್ಪತ್ರೆಯ ಸಿಬ್ಬಂದಿಯೇ ಮಾಡಿರಬೇಕು ಎಂದು ಮಹಿಳೆ ವಾದಿಸಿದ್ದಾಳೆ. ಆದರೆ ವಿಡಿಯೊವನ್ನು ರೆಕಾರ್ಡ್ ಮಾಡಿದ ವ್ಯಕ್ತಿ ಆಸ್ಪತ್ರೆಯಿಂದ ಹೊರಹೋಗಿದ್ದಾನೆ ಮತ್ತು ಅವರು ತಮ್ಮ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಆಸ್ಪತ್ರೆ ಹೇಳಿಕೊಂಡಿದೆ. ಹಾಗಾಗಿ ಆಸ್ಪತ್ರೆಯ ವಿರುದ್ದ ಸಿಟ್ಟಿಗೆದ್ದ ಮಹಿಳೆ ಆಸ್ಪತ್ರೆಯ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರಣ ಆಸ್ಪತ್ರೆಯ ಈ ಪ್ರತಿಕ್ರಿಯೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆಯ ಬೇಜವಾಬ್ದಾರಿಯ ಬಗ್ಗೆ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA