ಬೆಳಗಾವಿ: ಮದುವೆಯಾದ ಒಂದು ತಿಂಗಳಿಗೇ ಪ್ರಿಯಕರನೊಡನೆ ಓಡಿ ಹೋದ ಪತ್ನಿಯನ್ನು ಅವಳ ಸಂಗಾತಿಯೊಡನೇ ಪತಿ ಕೊಚ್ಚಿ ಕೊಲೆಗೈದಿರುವ ಘಟನೆ ಅಥಣಿಯ ಕೋಕಟನೂರ ಗ್ರಾಮದ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಯಾಸಿನ್ ಬಾಗೊಡೆ (21) ಮತ್ತು ಹೀನಾ ಕೌಸರ್ ಸುದಾರಾಣೆ (19) ಮೃತ ಜೋಡಿಗಳಾಗಿದ್ದು, ತೌಫಿಕ್ ಕ್ಯಾಡಿ ಕೊಲೆ ಆರೋಪಿಯಾಗಿದ್ದಾನೆ.
ನಾಲ್ಕು ತಿಂಗಳ ಹಿಂದೆ ಮದುವೆ ಆಗಿದ್ದ ನವ ವಿವಾಹಿತ ಜೋಡಿಯಾದ ಹೀನಾ ಮೆಹಬೂಬ್ ಹಾಗೂ ತೌಫಿಕ್ ಶೌಕತ್ ಅವರು ವಿವಾಹದ ಬಳಿಕ ಇಬ್ಬರೂ ಬಾಡಿಗೆ ಕಾರಿನಲ್ಲಿ ದರ್ಗಾಕ್ಕೆ ಹೋಗಿದ್ದರು. ಈ ವೇಳೆ ಕಾರು ಚಾಲಕ ಯಾಸಿನ್ ಅದಮ್(21) ಮೇಲೆ ಹೀನಾಗೆ ಪ್ರೀತಿಯಾಗಿದೆ.
ದರ್ಗಾಕ್ಕೆ ಹೋಗಿ ಬಂದ ಒಂದೇ ತಿಂಗಳಲ್ಲಿ ಪ್ರಿಯಕರ ಯಾಸಿನ್ ಜೊತೆ ಹೀನಾ ಗಂಡನನ್ನು ಬಿಟ್ಟು ಓಡಿ ಹೋಗಿದ್ದಳು. ಇದರಿಂದ ಕೋಪಗೊಂಡ ಪತಿ ತೌಫಿಕ್ ಶೌಕತ್ ಹತ್ಯೆಗೆ ಸಂಚು ಹೂಡಿದ್ದ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಯಾಸಿನ್, ಹೀನಾ ಜೋಡಿ ಮೇಲೆ ಮಂಗಳವಾರ ಸಂಜೆ ತೌಫಿಕ್ ದಾಳಿ ನಡೆಸಿ, ಲಾಂಗ್ ನಿಂದ ಹಲ್ಲೆ ನಡೆಸಿ, ಪತ್ನಿ ಹೀನಾಳನ್ನು ಹತ್ಯೆ ಮಾಡಿದ್ದಾನೆ. ನಂತರ ಆಕೆಯ ಪ್ರಿಯಕರ ಯಾಸಿನ್ನನ್ನೂ ಕೊಲೆ ಮಾಡಿದ್ದಾನೆ.
ಇದೇ ವೇಳೆ, ಜಗಳ ಬಿಡಿಸಲು ಬಂದ ಅತ್ತೆ, ಮಾವನ ಮೇಲೂ ತೌಫಿಕ್ ಲಾಂಗ್ ನಿಂದ ಹಲ್ಲೆ ಮಾಡಿ, ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಗಾಯಾಳುಗಳಿಗೆ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


