ಧಾರವಾಡ: ಯುವ ಕಲಾವಿದನೊಬ್ಬ ತನ್ನದೇ ಕಲ್ಪನೆಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಮಣ್ಣಿಯಲ್ಲಿ ತಯಾರಿಸಿ, ಎಲ್ಲರ ಗಮನ ಸೆಳೆದಿದ್ದಾನೆ.
ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯೂ ಆಗಲಿದೆ. ಈ ಸಂದರ್ಭದಲ್ಲಿ ಧಾರವಾಡದ ಯುವ ಕಲಾವಿದ ರೋಹಿತ್ ಹಿರೇಮಠ ತನ್ನದೇ ಕಲ್ಪನೆಯಲ್ಲಿ 15 ಇಂಚು ಎತ್ತರದ ರಾಮಲಲ್ಲಾ ವಿಗ್ರಹವನ್ನು ನಿರ್ಮಿಸಿದ್ದಾರೆ.
ಧಾರವಾಡ ನಗರದ ಕೆಲಗೇರಿ ಬಡಾವಣೆಯ ಯುವ ಕಲಾವಿದ ರೋಹಿತ್ ಹಿರೇಮಠ, ಸರಕಾರಿ ಕಲಾ ಗ್ಯಾಲರಿಯಲ್ಲಿ ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ರೋಹಿತ್ ತಂದೆ ಮಂಜುನಾಥ ಹಿರೇಮಠ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಕರು. ತಂದೆಯಂತೆಯೇ ಮಗನು ಕೂಡ ಕಲಾವಿದನೇ. ಈಗಾಗಲೇ ಅನೇಕ ಕಲಾಕೃತಿ ಮಾಡಿರೋ ರೋಹಿತ್ ಗೆ ರಾಮನೆಂದರೆ ತುಂಬಾನೇ ಭಕ್ತಿ. ಇದೇ ಕಾರಣಕ್ಕೆ ಐವತ್ತೊಂದು ಗಂಟೆಗಳ ಕಾಲ ಕೆಲಸ ಮಾಡಿ, 15 ಇಂಚಿನ ರಾಮಲಲ್ಲಾ ವಿಗ್ರಹವನ್ನು ತಯಾರಿಸಿ, ಎಲ್ಲರನ್ನೂ ಚಕಿತಗೊಳಿಸಿದ್ದಾನೆ.


