ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಹುಚ್ಚಿನಿಂದ ನಮ್ಮ ಮೆಟ್ರೋದಲ್ಲಿ ಆಟಿಕೆ ಗನ್ ಬಳಸಿ ‘ಪ್ರಾಂಕ್’ (Prank) ವಿಡಿಯೋ ಮಾಡಲು ಯತ್ನಿಸಿದ ಯುವಕನೊಬ್ಬ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ದಂಡ ವಿಧಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಮಾರ್ಚ್ 9ರಂದು (ಇಂದು) ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈತ ತನ್ನ ಜೇಬಿನಲ್ಲಿ ಆಟಿಕೆ ಗನ್ (Toy Gun) ಇಟ್ಟುಕೊಂಡು ಮೆಟ್ರೋ ರೈಲಿನಲ್ಲಿ ವಿಡಿಯೋ ಮಾಡಲು ಯೋಜಿಸಿದ್ದನು. ಆದರೆ, ಆತನ ಜೇಬಿನಲ್ಲಿದ್ದ ಗನ್ ನೋಡಿ ಅಸಲಿ ಇರಬಹುದೆಂದು ಭಾವಿಸಿದ ಸಹ ಪ್ರಯಾಣಿಕರು ಗಾಬರಿಗೊಂಡು ಕೂಡಲೇ ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಮೆಟ್ರೋ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಅರ್ಜುನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ತಪಾಸಣೆ ನಡೆಸಿದಾಗ ಅದು ನಕಲಿ ಅಥವಾ ಆಟಿಕೆ ಗನ್ ಎಂದು ತಿಳಿದುಬಂದಿದೆ. ಕೇವಲ ಸೋಶಿಯಲ್ ಮೀಡಿಯಾ ರೀಲ್ಸ್ ಮತ್ತು ಪ್ರಾಂಕ್ ವಿಡಿಯೋಗಾಗಿ ಇದನ್ನು ತಂದಿದ್ದಾಗಿ ಅರ್ಜುನ್ ತಪ್ಪೊಪ್ಪಿಕೊಂಡಿದ್ದಾನೆ.
ಮೆಟ್ರೋದಂತಹ ಸಾರ್ವಜನಿಕ ಸ್ಥಳದಲ್ಲಿ ಇಂತಹ ಕಿಡಿಗೇಡಿತನ ನಡೆಸಿದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳು ಆತನಿಗೆ 400 ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ಇಂತಹ ಕೃತ್ಯಗಳನ್ನು ಮಾಡದಂತೆ ಕಠಿಣ ಎಚ್ಚರಿಕೆ ನೀಡಿ, ಆತನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


