ನಮ್ಮತುಮಕೂರು ಎಕ್ಸ್ ಕ್ಲೂಸಿವ್ ರಿಪೋರ್ಟ್:
ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ, ಕರ್ನಾಟಕ ಹೈಕೋರ್ಟ್ ವಕೀಲರಾದ ರಮೇಶ್ ನಾಯಕ್ ಎಲ್. ಅವರು ತಮಗೆ ಪಕ್ಷದಿಂದ ನೀಡಲಾಗಿದ್ದ ಎಂಎಲ್ ಎ ಟಿಕೆಟ್ ನ್ನು ವಾಪಸ್ ಮಾಡಿದ್ದಾರೆ.
ಈ ಬಗ್ಗೆ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ಅವರು, ನಮ್ಮ ಹೆಮ್ಮೆಯ “ತುಮಕೂರು” ಜಿಲ್ಲೆಯ ವಿಶ್ವವಿಖ್ಯಾತ ಸಿದ್ದಗಂಗಾ ಮಠದಂತಹ ಶ್ರೀಮಂತ ಧಾರ್ಮಿಕ—ಶೈಕ್ಷಣಿಕ ಪರಿಸರದಲ್ಲಿ ಬೆಳೆದು ಬಂದಿರುವ ನಾನು ಮತ್ತು ನಮ್ಮ ಕುಟುಂಬ ಎಂತಹ ಕಠಿಣಾತಿ ಕಠಿಣ ಸಂದರ್ಭದಲ್ಲೂ ಸತ್ಯ ನ್ಯಾಯ—ಧರ್ಮದ ಹಾದಿ ಬಿಟ್ಟು ನಡೆದಿಲ್ಲ ಹಾಗೂ ಭ್ರಷ್ಟಾಚಾರದ ಜೊತೆಗೆ ರಾಜಿಯಾಗಿಲ್ಲ. ಆಮ್ ಆದ್ಮಿ ಪಾರ್ಟಿಯ 2023 ಕರ್ನಾಟಕ ವಿಧಾನ ಸಭಾ ಚುನಾವಣೆಗೆ ತುರುವೇಕೆರೆ ವಿಧಾನ ಸಭಾ ಕ್ಷೇತ್ರದಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಕ್ಕೆ ಪಕ್ಷಕ್ಕೆ ಋಣಿಯಾಗಿದ್ದೇನೆ. ಆದರೆ, ಅಷ್ಟೇ ವಿನಮ್ರತೆಯಿಂದ ನನ್ನ ಉಮೇದುವಾರಿಕೆಯನ್ನು ಹಿಂದಿರುಗಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಟಿಕೆಟ್ ವಾಪಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ನಾಯಕ್ ಎಲ್. ಅವರು ನಮ್ಮತುಮಕೂರು ಜೊತೆಗೆ ಮಾತನಾಡಿ, ಕೇಜ್ರಿವಾಲ್ ಮಾತಿಗೂ ಕರ್ನಾಟಕದ ಎಎಪಿ ಮುಖಂಡರು ನಡೆದುಕೊಳ್ಳುವುದಕ್ಕೂ ಹೋಲಿಕೆಯಾಗುತ್ತಿಲ್ಲ, ಪಕ್ಷದಲ್ಲಿ ಸಿದ್ಧಾಂತವನ್ನು ಸರಿಯಾಗಿ ಪಾಲಿಸುತ್ತಿಲ್ಲ, ಶಿಸ್ತು ಕಾಯುತ್ತಿಲ್ಲ. ಹಾಗಾಗಿ ನಾನು ಎಂಎಲ್ ಎ ಟಿಕೆಟ್ ವಾಪಸ್ ಕೊಡುತ್ತಿದ್ದೇನೆ ಎಂದು ತಿಳಿಸಿದರು.
ಕೇಜ್ರಿವಾಲ್ ಅವರು ಪ್ರತಿಪಾದಿಸುತ್ತಿರುವ ಸಿದ್ಧಾಂತಕ್ಕೂ ಇಲ್ಲಿ ನಡೆದುಕೊಳ್ಳುವ ರೀತಿಗೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಅವರು ತಿಳಿಸಿದರು. ಹಾಗಿದ್ರೆ, ನೀವು ಆಮ್ ಆದ್ಮಿ ಪಕ್ಷವನ್ನು ತೊರೆಯುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ, ನಾನು ನನ್ನ ಟಿಕೆಟ್ ಮಾತ್ರವೇ ಹಿಂದಿರುಗಿಸಿದ್ದೇನೆ. ಆಮ್ ಆದ್ಮಿ ಪಕ್ಷದಲ್ಲೇ ಮುಂದುವರಿಯುತ್ತಿದ್ದೇನೆ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy