ತುಮಕೂರು: ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಬರಗೂರು ಗ್ರಾಮ ಪಂಚಾಯಿತಿಯ ಕದಿರೇಹಳ್ಳಿ, ಯಲಪೇನಹಳ್ಳಿ, ಮತ್ತು ಯಲಪೇನಹಳ್ಳಿ ಗೊಲ್ಲರಹಟ್ಟಿಯ ಸರ್ಕಾರಿ ಶಾಲೆ ಮುಚ್ಚುತ್ತಿರುವುದನ್ನ ವಿರೋಧಿಸಿ AIDSO ನೇತೃತ್ವದಲ್ಲಿ ಗ್ರಾಮದ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ AIDSO ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರಾದ ಭರತ್ ಅವರು, “ಸತತವಾಗಿ ಬಂದ ಸರ್ಕಾರಗಳು ಶಿಕ್ಷಣವನ್ನು ಮಾರಾಟದ ವಸ್ತುವನ್ನಾಗಿ ಮಾಡಿವೆ. ಶಿಕ್ಷಕರಿಗೆ ಶೈಕ್ಷಣಿಕ ಕೆಲಸಕ್ಕಿಂತ ಹೆಚ್ಚಾಗಿ ಜನಗಣತಿ, ಬೀದಿ ನಾಯಿಗಳ ಎಣಿಕೆಯಂತಹ ಕೆಲಸಗಳನ್ನು ನೀಡುವ ಮೂಲಕ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ. ಸರಿಯಾದ ಮೂಲಸೌಕರ್ಯ ಮತ್ತು ಶಿಕ್ಷಕರನ್ನು ನೀಡದೆ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇದೆ ಎಂಬ ನೆಪವೊಡ್ಡಿ, ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್–ಮ್ಯಾಗ್ನೆಟ್ ಶಾಲೆ ಸ್ಥಾಪಿಸಿ ರಾಜ್ಯದ 40 ಸಾವಿರ ಶಾಲೆಗಳನ್ನು ಮುಚ್ಚಲು ಹೊರಟಿದೆ. ಈ ಯೋಜನೆ ಪ್ರಕಾರ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಬರಗೂರು ಶಾಲೆಯನ್ನ ಕೆಪಿಎಸ್ ಮ್ಯಾಗ್ನೆಟ್ ಎಂದು ಗುರುತಿಸಿ, ಅದರ ವ್ಯಾಪ್ತಿಯಲ್ಲಿ ಬರುವ 9 ಹಳ್ಳಿಯ ಸರ್ಕಾರಿ ಶಾಲೆ ಮುಚ್ಚಲು ಮುಂದಾಗಿದೆ. ಈ ನೀತಿಯು ರೈತ-ಕಾರ್ಮಿಕರ ಮಕ್ಕಳಿಗೆ ಮಾಡುವ ದೊಡ್ಡ ದ್ರೋಹ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಯಾವುದೇ ಕಾರಣಕ್ಕೂ ನಮ್ಮ ಊರಿನ ಸರ್ಕಾರಿ ಶಾಲೆಯನ್ನ ನಾವು ಮುಚ್ಚಲು ಬಿಡುವುದಿಲ್ಲ. ಇಲ್ಲಿಂದ ಬರಗೂರಿಗೆ ಹೋಗುವುದಕ್ಕೆ ಸರಿಯಾದ ಸಾರಿಗೆ ಸಂಪರ್ಕ ಇಲ್ಲ. ನಾವುಗಳೇ ಹೋಗುವುದು ಬಹಳ ಕಷ್ಟ. ಇಂತಹ ಸಂದರ್ಭದಲ್ಲಿ ನಮ್ಮ ಚಿಕ್ಕ– ಚಿಕ್ಕ ಮಕ್ಕಳು ಹೇಗೆ ಹೋಗಲು ಸಾಧ್ಯ?’ ಎಂದು ಊರಿನ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.
ಮುಂದಿನ ಹಂತದ ಹೋರಾಟಕ್ಕಾಗಿ ‘ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ’ಯನ್ನು ರಚಿಸಲಾಯಿತು. ಪ್ರತಿಭಟನೆಯಲ್ಲಿ AIDSO ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಹಾಗೂ ಪದಾಧಿಕಾರಿಗಳಾದ ಸೈಯದ್, ಸಂದೀಪ್ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


