ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರಸಭೆ ಅಭಿವೃದ್ಧಿಯಾಗ ಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾದದ್ದು, ಸಾರ್ವಜನಿಕರು ಸಹಕಾರ ನೀಡಿ, ನಗರಸಭೆಗೆ ಕಟ್ಟಬೇಕಾದ ಅಗತ್ಯ ತೆರಿಗೆಗಳನ್ನು ಪಾವತಿ ಮಾಡಿದರೆ ಮಾತ್ರ ನಗರಸಭೆಯಿಂದ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್ ರವರು ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಂಷುನ್ನೀಸಾರವರ ಅಧ್ಯಕ್ಷತೆಯಲ್ಲಿ ಹಿರಿಯೂರು ನಗರಸಭೆಯ 2022-23ನೇ ಸಾಲಿನ ಕರಡು ಆಯವ್ಯಯ ಪಟ್ಟಿ ತಯಾರಿಸುವ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರದಲ್ಲಿ ಬಹಳಷ್ಟು ಸಾರ್ವಜನಿಕರು ಬಹಳ ವರ್ಷಗಳಿಂದ ತಮ್ಮ ಮನೆಗಳ ಕಂದಾಯಗಳನ್ನು ಕಟ್ಟಿರುವುದಿಲ್ಲ, ಅನೇಕ ಉದ್ದಿಮೆದಾರರು ವರ್ತಕರು ತಮ್ಮ ಟ್ರೇಡ್ ಲೈಸನ್ಸ್ ಗಳನ್ನು ನವೀಕರಿಸಿರುವುದಿಲ್ಲ, ಅವುಗಳನ್ನು ಈಗ ಪಟ್ಟಿ ಮಾಡಲು ಹೇಳಿದ್ದೇನೆ, ಅವರಿಗೆ ನೋಟೀಸ್ ನೀಡುವ ಮೂಲಕ, ಕಂದಾಯ ವಸೂಲಾತಿ ಮಾಡಬೇಕಿದೆ ಎಂಬುದಾಗಿ ಅವರು ಹೇಳಿದರು.
ಆದರೆ ನಮ್ಮಲ್ಲಿ ಈ ಎಲ್ಲಾ ಕೆಲಸ-ಕಾರ್ಯಗಳಿಗೆ ನೌಕರರ ಕೊರತೆಯಿದ್ದು, ಅಗತ್ಯ ಸಿಬ್ಬಂದಿ ಬೇಕಾಗಿದೆ, ಈ ಬಗ್ಗೆ ಕೌನ್ಸಿಲ್ ಸಭೆ ನಡೆಸಿ, ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಸಾರ್ವಜನಿಕರು ಸರಿಯಾಗಿ ತಮ್ಮ ಆಸ್ತಿಗಳ ಕಂದಾಯ ಕಟ್ಟಿದರೆ ಯಾವ ಅನುದಾನವಿಲ್ಲದೆ, ನಗರಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದಾಗಿ ಅವರು ಹೇಳಿದರು.
ನಗರದ ಸ್ವಚ್ಛತೆ ಮತ್ತು ಕಸದ ನಿರ್ಮೂಲನೆ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳದೆ, ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದಾಗಿ ಘಾಟ್ ರವಿ ಸೇರಿದಂತೆ ಸಾರ್ವಜನಿಕರ ಆಪಾದನೆಗೆ ಸ್ಪಂದಿಸಿದ ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್ ರವರು ಮಾತನಾಡಿ, ನಗರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಕಸ ಬಿಸಾಕುತ್ತಿದ್ದು, ಈ ಬಗ್ಗೆ ಹಲವು ಬಾರಿ ಅವರಿಗೆ ತಿಳುವಳಿಕೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಇನ್ನು ಮುಂದೆ ಹೀಗೆ ಮಾಡಿದರೆ ಅವರುಗಳಿಗೆ ಸೂಕ್ತ ದಂಡ ವಿಧಿಸಬೇಕಾಗುತ್ತದೆ ಎಂಬುದಾಗಿ ಹೇಳಿದರಲ್ಲದೆ.
ನಗರದಲ್ಲಿ ಜನಸಾಮಾನ್ಯರೇ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ, ಕಸದ ಗಾಡಿಗಳಿಗೆ ನೀಡಿದರೆ ಪೌರಕಾರ್ಮಿಕರಿಗೆ ವಿಂಗಡಿಸುವುದು ಸುಲಭವಾಗುತ್ತದೆ, ಇಲ್ಲದಿದ್ದಲ್ಲಿ ಪೌರಕಾರ್ಮಿಕರೇ ವಿಂಗಡಿಸಿ ಕಸದ ವಿಲೇವಾರಿ ಮಾಡಬೇಕಾಗುತ್ತದೆ. ಅಲ್ಲದೆ ಈ ಕೆಲಸಕ್ಕೆ ಪೌರಕಾರ್ಮಿಕರ ಕೊರತೆಯೂ ಸಹ ಇದ್ದು, ಇದರಿಂದ ಸಮಸ್ಯೆಯಾಗುತ್ತಿದೆ ಎಂದರು.
ನಗರಸಭೆ ಅಧ್ಯಕ್ಷೆ ಶ್ರೀಮತಿ ಶಂಷುನ್ನೀಸಾ ಮಾತನಾಡಿ, ನಗರದ ಸ್ವಚ್ಛತೆ ಹಾಗೂ ಕಸದ ವಿಲೇವಾರಿ ಕೇವಲ ಪೌರಕಾರ್ಮಿಕರ ಅಥವಾ ನಗರಸಭೆಯ ಜವಾಬ್ದಾರಿ ಮಾತ್ರವಲ್ಲ, ಇದರಲ್ಲಿ ಸಾರ್ವಜನಿಕರ ಜವಾಬ್ದಾರಿ ಸಹ ಸೇರಿದೆ, ಪೌರಕಾರ್ಮಿಕರು ಒಂದು ಬೀದಿ ಕಸ ಸ್ವಚ್ಛಗೊಳಿಸಿ ವಾಪಸ್ಸ್ ಬರುವಷ್ಟರಲ್ಲಿ ಸಾರ್ವಜನಿಕರು ಮತ್ತೆ ಅಲ್ಲಿ ಕಸಹಾಕಿರುತ್ತಾರೆ, ಅದಕ್ಕೆ ನಗರಸಭೆಯೊಂದಿಗೆ ಸಾರ್ವಜನಿಕರು ಸಹ ನಗರದ ಸ್ವಚ್ಛತೆಗೆ ಸಹಕರಿಸಬೇಕು ಎಂಬುದಾಗಿ ಮನವಿ ಮಾಡಿದರು.
ನಗರದಲ್ಲಿನ ಖಾಸಗಿ ಕುಡಿಯುವ ನೀರಿನ ಘಟಕಗಳು ಸಾರ್ವಜನಿಕರಿಂದ 20ಲೀಟರ್ ನೀರಿಗೆ 10ರೂಪಾಯಿ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ನಗರಸಭೆಯಿಂದಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ, ಸಾರ್ವಜನಿಕರಿಗೆ 5 ರೂಪಾಯಿಗೆ 20 ಲೀಟರ್ ನೀರನ್ನು ಪೂರೈಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಪೌರಾಯುಕ್ತರು ನಗರಸಭೆಯ ಸದಸ್ಯರೊಂದಿಗೆ ಈ ಬಗ್ಗೆ ಚರ್ಚಿಸಿ, ಮುಂದಿನ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಎಂಬುದಾಗಿ ತಿಳಿಸಿದರು.
ನಗರದಲ್ಲಿನ ಪಾರ್ಕ್ ಗಳನ್ನು ಅಭಿವೃದ್ಧಿಗೊಳಿಸಿ, ಮಕ್ಕಳ ಆಟದ ಉಪಕರಣಗಳ ಅಳವಡಿಕೆ ಮಾಡಬೇಕೆಂಬ ಸಾರ್ವಜನಿಕರ ಮನವಿಗೆ ಪ್ರತಿಕ್ರಿಯಿಸಿದ ಪೌರಾಯುಕ್ತರು ಈಗಾಗಲೇ ನಗರದಲ್ಲಿ 4 ಪಾರ್ಕ್ ಗಳ ಅಭಿವೃದ್ಧಿಗೆ 40 ಲಕ್ಷ ಹಣ ಬಿಡುಗಡೆ ಮಾಡಿದ್ದು, ಆ ಪಾರ್ಕ್ ಗಳಲ್ಲಿ ಸ್ವಚ್ಛತೆ ನೈರ್ಮಲ್ಯ ಕಾಪಾಡುವ ಮೂಲಕ ಮುಂದಿನ ದಿನಗಳಲ್ಲಿ ಮಕ್ಕಳ ಆಟದ ಉಪಕರಣ ಮತ್ತು ಜಿಮ್ ಉಪಕರಣಗಳ ಅಳವಡಿಕೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪತ್ರಿಕೆದಾರರು ಹಿರಿಯೂರು ನಗರದಲ್ಲಿನ ಬಡವಾಣೆಗಳಲ್ಲಿನ ರಸ್ತೆಡಾಂಬರೀಕರಣ ಮತ್ತು ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಬಡಾವಣೆಗಳಲ್ಲಿ ಮನೆಗಳಿಗಿಂತ ಎತ್ತರದಲ್ಲಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮಳೆ ಬಂದಾಗ ರಸ್ತೆಯ ಹಾಗೂ ಚರಂಡಿಯ ನೀರು ಬಡವಾಣೆ ಮನೆಗಳಿಗೆ ನುಗ್ಗುತ್ತಿದೆ ಎಂಬುದಾಗಿ ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತರು, ನಗರಸಭೆ ಇಂಜಿನಿಯರ್ ಗಳಿಗೆ ಈ ಬಗ್ಗೆ ತಿಳುವಳಿಕೆ ನೀಡಿ, ಇನ್ನುಮುಂದೆ ಬಡಾವಣೆಗಳಲ್ಲಿ ಇರುವಂತಹ ರಸ್ತೆಯನ್ನು ಅಗೆದು, ನಂತರ ಅದನ್ನು ಮನೆಗಳ ಮಟ್ಟಕ್ಕೆ ರಸ್ತೆಯ ಡಾಂಬರೀಕರಣ ಕಾಮಗಾರಿ ಮಾಡಿಸುವಂತೆ ಸಲಹೆ ನೀಡಲಾಗುವುದು ಎಂಬುದಾಗಿ ಉತ್ತರಿಸಿದರು.
ಗಾಡಿ ಬಸಣ್ಣ ಬಡಾವಣೆಯ ಚನ್ನಬಸಣ್ಣ ಮಾತನಾಡಿ, ನಗರದಲ್ಲಿ ಹಾದು ಹೋಗುವ ಪ್ರಮುಖ ಚಾನಲ್ ಗಳಿಗೆ ಹಾಗೂ ಚರಂಡಿಗಳಿಗೆ ಮಾಂಸದ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ತಡರಾತ್ರಿ ಸಮಯದಲ್ಲಿ ತಂದು ಹಾಕುತ್ತಿದ್ದು, ಇದರಿಂದ ನೈರ್ಮಲ್ಯ ಹದಗೆಡುತ್ತಿದೆ, ಈ ಕುರಿತು ನಗಸಭೆ ಕ್ರಮಕೈಗೊಳ್ಳಬೇಕು ಎಂಬುದಾಗಿ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತರು ನಗರದ ಪ್ರಮುಖ ಸ್ಥಳಗಳಲ್ಲಿ ಪೋಲೀಸ್ ಇಲಾಖೆ ಸಹಕಾರದೊಂದಿಗೆ ಅವರು ಗುರುತು ಮಾಡಿರುವ ಸಾರ್ವಜನಿಕ ಸ್ಥಳಗಳಲ್ಲಿ 1 ಕೋಟಿ 25 ಲಕ್ಷ ರೂಗಳ ವೆಚ್ಚದಲ್ಲಿ ಡಿಜಿಟಲ್ ಕ್ಯಾಮಾರಾ ಅಳವಡಿಕೆ ಮಾಡಲಾಗುತ್ತಿದ್ದು, ಈ ಕೆಲಸ ಪೂರ್ಣಗೊಂಡರೆ ಇಂತಹ ಅಹಿತಕರ ಘಟನೆ ಮತ್ತು ಅಪರಾಧ ಚಟುವಟಿಕೆಗಳನ್ನು ತಡೆಯುವಂತಹ ಕೆಲಸವಾಗುತ್ತದೆ ಎಂಬುದಾಗಿ ತಿಳಿಸಿದರು.
ದಲಿತ ಸೇನೆ ರಾಜ್ಯ ಕಾರ್ಯದರ್ಶಿ ಘಾಟ್ ರವಿ ಮಾತನಾಡಿ, ಕಳೆದ ವರ್ಷದ ಆಯವ್ಯಯದಲ್ಲಿ ಎಲ್ಲಾ ಜನಾಂಗದ ರುದ್ರಭೂಮಿ ಅಭಿವೃದ್ಧಿಗಾಗಿ ಹಣ ಮೀಸಲಿಡುವ ಬಗ್ಗೆ ಚರ್ಚೆ ನಡೆದು, ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಸಹ ಭರವಸೆ ನೀಡಿದ್ದು, ಇಲ್ಲಿಯವರೆಗೂ ಈ ಭರವಸೆ ಈಡೇರಿಸಲಾಗಿಲ್ಲ ಎಂಬುದಾಗಿ ದೂರಿದರು.
ನಗರಸಭೆ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್ ಮಾತನಾಡಿ, ನಗರದಲ್ಲಿ ರುದ್ರ ಭೂಮಿ ಅಭಿವೃದ್ಧಿಗೆ ಈಗಾಗಲೇ ಸುಮಾರು 80 ಲಕ್ಷ ಹಣವನ್ನು ಮೀಸಲಿಟ್ಟಿದ್ದು, ಈಗ ಪ್ರಸ್ತುತ ಹಿಂದೂ ರುದ್ರಭೂಮಿಗೆ 40 ಲಕ್ಷ ಹಾಗೂ ಕ್ರೈಸ್ತರ ರುದ್ರಭೂಮಿ ಅಭಿವೃದ್ಧಿಗೆ ಕಾಮಗಾರಿ ಆರಂಭಿಸಲಾಗುವುದು ಎಂಬುದಾಗಿ ಭರವಸೆ ನೀಡಿದರು.
ನೂತನವಾಗಿ ನಿರ್ಮಿಸಿರುವ ನಗರಸಭೆ ಕಟ್ಟಡವನ್ನು ಹೊಸ ವರ್ಷದಲ್ಲಿಯಾದರು ಉದ್ಘಾಟಿಸಿ ಸಾರ್ವಜನಿಕರ ಸೇವೆಗೆ ಅರ್ಪಿಸಬೇಕು ಎಂಬುದಾಗಿ ಕಾಂಗ್ರೆಸ್ ಮುಖಂಡರಾದ ದಾದಾಪೀರ್ ಸೇರಿದಂತೆ ಸಾರ್ವಜನಿಕರು ಸಭೆಯಲ್ಲಿ ಒತ್ತಾಯಿಸಿದ ಮನವಿಗೆ ಉತ್ತರಿಸಿದ ಡಿ.ಉಮೇಶ್ ಮಾತನಾಡಿ,
ಸುಮಾರು ನಾಲ್ಕು ಕೋಟಿ ರೂಗಳ ವೆಚ್ಚದಲ್ಲಿ ನಗರಸಭೆಗೆ ನೂತನ ಕಟ್ಟಡವನ್ನು ನಿರ್ಮಿಸಲಾಗಿದ್ದು, ಈ ಕಟ್ಟಡಕ್ಕೆ ಅಗತ್ಯ ಪೀಠೋಪಕರಣಗಳಿಗಾಗಿ ಕ್ಷೇತ್ರದ ಶಾಸಕರು ಒಂದೂವರೆ ಕೋಟಿ ರೂಗಳ ಹೆಚ್ಚಿನ ಅನುದಾನ ನೀಡಿದ್ದು, ಭರದಿಂದ ಕೆಲಸ ಸಾಗುತ್ತಿದೆ, ಶೀಘ್ರದಲ್ಲೇ ಕ್ಷೇತ್ರದ ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಹೊಸವರ್ಷದಲ್ಲಿ ಈ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಅರ್ಪಿಸಲಾಗುವುದು ಎಂಬುದಾಗಿ ಪೌರಾಯುಕ್ತರು ಸಭೆಗೆ ತಿಳಿಸಿದರು
ಇಂದಿನ ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷರಾದ ಶಂಷುನ್ನೀಸಾ, ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ಪೌರಾಯುಕ್ತರಾದ ಡಿ.ಉಮೇಶ್, ಕಂದಾಯ ಅಧಿಕಾರಿ ಜಯಣ್ಣ ಸೇರಿದಂತೆ ನಗರಸಭೆ ಸದಸ್ಯರುಗಳು, ಹಾಗೂ ನಗರಸಭೆ ಸಿಬ್ಬಂದಿ, ನಗರದ ಪತ್ರಕರ್ತರುಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy