ತುಮಕೂರು: ಶಿರಾ ತಾಲ್ಲೂಕು ಆಡಳಿತ ಸೌಧದಲ್ಲಿ ಶಾಸಕ ಹಾಗೂ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ನೇತೃತ್ವದಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ೩೮೧ ಅಹವಾಲು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈವರೆಗೂ ಜಿಲ್ಲೆಯ ಪಾವಗಡ, ಗುಬ್ಬಿ, ಕೊರಟಗೆರೆ, ಕುಣಿಗಲ್ ತಾಲೂಕುಗಳಿಗಿಂತ ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಹೆಚ್ಚಿನ ಅಹವಾಲುಗಳು ಸ್ವೀಕೃತವಾಗಿವೆ.
೩೮೧ ಅರ್ಜಿ ಸ್ವೀಕಾರ:
ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ೩೦೭, ನಗರಸಭೆ ೧೫, ಕೃಷಿ ಇಲಾಖೆ ೧೦, ಶಿಕ್ಷಣ ಇಲಾಖೆ ೨, ಸಮಾಜ ಕಲ್ಯಾಣ ಇಲಾಖೆ ೧, ಅರಣ್ಯ ಇಲಾಖೆ ೧, ಸಣ್ಣ ನೀರಾವರಿ ೨, ಭೂ ದಾಖಲೆಗಳ ಇಲಾಖೆ ೯, ಆರೋಗ್ಯ ೧, ಕೆಎಸ್ ಆರ್ ಟಿಸಿ ೫, ತಾಲ್ಲೂಕು ಪಂಚಾಯತಿ ೨೨, ಆಹಾರ ೪, ಇತರೆ ೨ ಸೇರಿದಂತೆ ಒಟ್ಟು ೩೮೧ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ವಯೋವೃದ್ಧರಿಗೂ ಸ್ಪಂದಿಸದ ಅಧಿಕಾರಿಗಳು:
ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲು ವಯೋವೃದ್ಧರ ಮನವಿಗಳಿಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಶಿರಾ ತಾಲ್ಲೂಕಿನ ಜನತೆ ಜನಸ್ಪಂದನ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟರು.
ವರ್ಷಗಳೇ ಕಳೆದರೂ ಸರ್ಕಾರಿ ಸೌಲಭ್ಯಗಳು ನಮಗೆ ಲಭ್ಯವಾಗುತ್ತಿಲ್ಲ. ಸಾಗುವಳಿ ಚೀಟಿ, ಪಹಣಿ, ತಿದ್ದುಪಡಿ, ವಸತಿ ಸೌಲಭ್ಯ, ಜಮೀನಿಗೆ ದಾರಿ ಬಿಡುವ ಬಗ್ಗೆ, ಪಿಂಚಣಿ ಸೌಲಭ್ಯ ನೀಡುವ ಮನವಿ ಅರ್ಜಿಗಳಿಗೆ ಅಧಿಕಾರಿಗಳು ಯಾವುದೇ ಕಿಮ್ಮತ್ತು ಕೊಡುತ್ತಿಲ್ಲ. ಕೆಲಸ ಕಾರ್ಯಗಳನ್ನು ಬಿಟ್ಟು ತಾಲ್ಲೂಕು ಕಚೇರಿಯಿಂದ ತಾಲ್ಲೂಕು ಪಂಚಾಯತಿ, ಅಲ್ಲಿಂದ ಗ್ರಾಮ ಪಂಚಾಯತಿಗೆ ಅಧಿಕಾರಿಗಳು ಅಲೆದಾಡಿಸುತ್ತಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಸೌಲಭ್ಯ ಕೈಸೇರುವುದು ಮಾತ್ರ ಮರೀಚಿಕೆ ಎಂದು ಸಮಸ್ಯೆಗಳನ್ನು ಶಾಸಕರ ಮುಂದೆ ಎಳೆ-ಎಳೆಯಾಗಿ ಬಿಚ್ಚಿಟ್ಟರು.
ಸಾಗುವಳಿ ಚೀಟಿಗಾಗಿ ತಾಲ್ಲೂಕಿನ ಮುದುಗೆರೆ ಕಾವಲ್ನ ಅಯ್ಯಣ್ಣ. ಮಳೆಯಿಂದ ಹಾನಿಗೊಳಗಾದ ಮನೆ ಪರಿಹಾರಕ್ಕಾಗಿ ವಿಕಲಚೇತನ ರಂಗರಾಜು ಅವರು ಮನವಿ ಮಾಡಿದಾಗ ಟಿ.ಬಿ.ಜಯಚಂದ್ರ ಅಹವಾಲು ಸಲ್ಲಿಸಿದವರಿಗೆ ಸಮಾಧಾನ ಹೇಳುತ್ತಾ, ಮನವಿದಾರರಿಗೆ ಶೀಘ್ರ ಪರಿಹಾರ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದಾಗ ಶಿರಾ ಉಪ ಅರಣ್ಯಾಧಿಕಾರಿ ನಾಗರಾಜು ಮಾತನಾಡಿ, ಅಯ್ಯಣ್ಣ ಅವರು ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವುದರಿಂದ ನಿಯಮಾನುಸಾರ ಹಕ್ಕುಪತ್ರ ನೀಡಲು ಅವಕಾಶವಿಲ್ಲವೆಂದು ಶಾಸಕರ ಗಮನಕ್ಕೆ ತಂದರು.
ದೇವಗೊಂಡನಹಳ್ಳಿಯ ಹನುಮಂತರಾಯಪ್ಪ ಸರ್ವೆ ಸ್ಕೆಚ್ ನಂತೆ ಪಹಣಿ ಇಂಡೀಕರಣ ಮಾಡಲು ಹಲವಾರು ಬಾರಿ ಕಂದಾಯ ನಿರೀಕ್ಷಕರಿಗೆ ಬೇಡಿಕೊಂಡರೂ ಪ್ರಯೋಜನವಿಲ್ಲ ಎಂದು ಸಮಸ್ಯೆ ಹೇಳಿಕೊಂಡಾಗ ನಿಯಮಾನುಸಾರ ಆದ್ಯತೆ ಮೇಲೆ ಇವರ ಅರ್ಜಿಗೆ ಪರಿಹಾರ ನೀಡಬೇಕು. ಸದರಿಯವರ ಹೆಸರಿಗೆ ಜಮೀನನ್ನು ಸರ್ವೇ ಸ್ಕೆಚ್‌ನಂತೆ ಪಹಣಿ ಇಂಡೀಕರಣಗೊಳಿಸಿ ಅನುಕೂಲ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಹಶೀಲ್ದಾರ್ ಡಾ: ದತ್ತಾತ್ರೇಯ ಜೆ. ಗಾದಾ ಅವರಿಗೆ ನಿರ್ದೇಶನ ನೀಡಿದರು.
ನಕಾಶೆಯಲ್ಲಿ ದಾರಿಯಿದ್ದರೂ ತಮ್ಮ ಜಮೀನುಗಳಿಗೆ ಹೋಗಿ ಬರಲು ಪಕ್ಕದ ಜಮೀನಿನವರು ಅಡ್ಡಿಪಡಿಸುತ್ತಿದ್ದು, ಸಮಸ್ಯೆಯನ್ನು ಬಗೆಹರಿಸಿ ಓಡಾಡಲು ದಾರಿ ಮಾಡಿಕೊಡಬೇಕೆಂದು ಹಲವಾರು ಅರ್ಜಿದಾರರು ಮನವಿ ಸಲ್ಲಿಸಿದಾಗ, ಶಾಸಕರು ಸ್ಪಂದಿಸಿ ಪೊಲೀಸ್ ನೆರವಿನಿಂದ ಇಂತಹ ಸಮಸ್ಯೆಗಳನ್ನು ಪರಿಹರಿಸಬೇಕು. ಕಂದಾಯ ಅಧಿಕಾರಿ-ಸಿಬ್ಬಂದಿಗಳಿಗೆ ಅಗತ್ಯ ನೆರವು ನೀಡಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶೋಭಾ ನಾಗರಾಜ್ ಅವರು ಗುಳಿಗೇನಹಳ್ಳಿ ಸಾರ್ವಜನಿಕರ ಆಸ್ಪತ್ರೆ ವೈದ್ಯರ ಸೇವೆ ನಮಗೆ ಬೇಡ. ಪದೇ ಪದೇ ಕರ್ತವ್ಯಕ್ಕೆ ಗೈರು ಹಾಜರಾಗುವುದರಿಂದ ರೋಗಿಗಳು ಚಿಕಿತ್ಸೆ ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯರನ್ನು ನಿಯೋಜನೆ ಮೇರೆಗೆ ನೇಮಕ ಮಾಡದೆ ಶಾಶ್ವತವಾಗಿ ನೇಮಕ ಮಾಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದಾಗ ಸ್ಪಂದಿಸಿದ ಶಾಸಕರು, ಬೇರೊಬ್ಬರ ವೈದ್ಯರ ನೇಮಕಕ್ಕೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಹತ್ತಾರು ಮಂದಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಪಡಿತರ ಚೀಟಿ ಬಂದಿಲ್ಲವೆಂದು ದೂರಿದಾಗ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಮುಂದಿನ ೧೫ ದಿನದಲ್ಲಿ ಆನ್ ಲೈನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಿ ಸರ್ಕಾರದಿಂದ ಆದೇಶ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಆಶ್ರಯ ಯೋಜನೆಯಡಿ ಭವಾನಿನಗರದ ಗೀತಾದೇವಿ, ಭುವನಹಳ್ಳಿಯ ರಾಮಲಿಂಗಪ್ಪ, ರಂಗನಾಥಪುರದ ಅನ್ನಪೂರ್ಣಮ್ಮ ಸೇರಿದಂತೆ ಮೇದಾರ ಸಮುದಾಯದವರು ಬಡವರಾದ ನಮಗೆ ವಸತಿ ಸೌಲಭ್ಯ ಕಲ್ಪಿಸಲು ಮನವಿ ಸಲ್ಲಿಸಿದರು.
ಗೋಣಿಹಳ್ಳಿ–ಗೊಲ್ಲಹಳ್ಳಿ-ಮೇಲುಕುಂಟೆ–ಶಿರಾ ಮಾರ್ಗವಾಗಿ ಕಾರ್ಯಾಚರಣೆಯಲ್ಲಿರುವ ಬಸ್ಸಿನ ವೇಳೆ ಬದಲಾವಣೆಗೆ ಮನವಿ ಬಂದ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ಬಸ್ ಕಾರ್ಯಾಚಾರಣೆ ವೇಳೆಯನ್ನು ಬದಲಿಸಬೇಕೆಂದು ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್‌ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಪ್ತಗಿರಿ ಬಡಾವಣೆಯ ನಿವಾಸಿ ಎಂ.ಎ. ಪದವೀಧರೆ ಎಸ್.ಬಿ. ನಿರ್ಮಲಾ ಕರ್ನಾಟಕ ಒನ್ ಲಾಗಿನ್ ಪಡೆಯಲು ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಕ್ರಮವಹಿಸಿಲ್ಲ ಎಂದು ಸಮಸ್ಯೆ ಹೇಳಿಕೊಂಡಾಗ ಸ್ಪಂದಿಸಿದ ಜಿಲ್ಲಾಧಿಕಾರಿ ಸದರಿ ಮಹಿಳೆಗೆ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಡೇಟಾ ಎಂಟ್ರಿ ಆಪರೇಟರ್ ಉದ್ಯೋಗ ಕಲ್ಪಿಸಲು ಸೂಚನೆ ನೀಡಿದರು.
ತಿಪ್ಪನಹಳ್ಳಿಯ ಗೋವರ್ಧನ್ ಟಿ.ಓ. ಎಂಬ ಬುದ್ಧಿಮಾಂದ್ಯ ಮಗುವಿನ ತಾಯಿ ಲೀಲಾವತಿ ತನ್ನ ಮಗುವಿನ ಪಾಲನೆ–ಪೋಷಣೆಗಾಗಿ ಸರ್ಕಾರದಿಂದ ದೊರೆಯುವ ವೇತನ ಸೌಲಭ್ಯ ನೀಡಬೇಕೆಂದು ಮನವಿ ಮಾಡಿದಾಗ ಕೂಡಲೇ ಕ್ರಮ ವಹಿಸಬೇಕೆಂದು ಜಿಲ್ಲಾ ವಿಕಲಚೇತನ ಕಲ್ಯಾಣ ಇಲಾಖೆ ಅಧಿಕಾರಿ ಚಿದಾನಂದ್ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜನಸ್ಪಂದನ ಕಾರ್ಯಕ್ರಮವು ಪೂರ್ವಯೋಜಿತವಾಗಿ ಯಾವುದೇ ಗೊಂದಲಗಳಿಲ್ಲದೆ ಅಚ್ಚುಕಟ್ಟಾಗಿ ರೂಪಿಸಲಾಗಿತ್ತು. ಸರದಿ ಸಾಲಿನಲ್ಲಿ ಒಮ್ಮೆಗೆ ಐದೈದು ಜನರಿಗೆ ಅಹವಾಲು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಶಾಸಕರು ಅರ್ಜಿಗಳನ್ನು ಸ್ವೀಕರಿಸಿ ಕ್ರಮವಿಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಅರ್ಜಿಗಳ ಮೇಲೆ ನಿರ್ದೇಶನಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ ಸ್ಮಾರ್ಟ್ ಫೋನ್ ಹಾಗೂ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನದ ಮಂಜೂರಾತಿ ಆದೇಶಗಳನ್ನು ವಿತರಿಸಲಾಯಿತು.
ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕಗಳಿಸುವ ಮೂಲಕ ರಾಜ್ಯಕ್ಕೆ ೨ನೇ ಸ್ಥಾನ ಪಡೆದು ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದ ಶಿರಾ ಪಟ್ಟಣದ ಶ್ರೀ ವಾಸವಿ ವಿದ್ಯಾಮಂದಿರದ ವಿದ್ಯಾರ್ಥಿನಿ ಡಿ.ಎಂ.ಹರ್ಷಿತಾ ಅವರ ತಂದೆಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮಾ ಕುರಿತು ಅರಿವು ಮೂಡಿಸಲು ದ್ವಾರನಕುಂಟೆಯ ಕರ್ನಾಟಕ ಜನಜಾಗೃತಿ ಕಲಾಸೇವಾ ಟ್ರಸ್ಟ್ ನ ಕಲಾವಿದ ಲೋಕೇಶ್ ಮತ್ತು ತಂಡದವರು ಪ್ರದರ್ಶಿಸಿದ ಬೀದಿ ನಾಟಕಕ್ಕೆ ಹಾಗೂ ಅಟೋ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನರಸಿಂಹಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ರೇಷ್ಮೆ ಉಪನಿರ್ದೇಶಕ ಬಾಲಕೃಷ್ಣಪ್ಪ ಸೇರಿದಂತೆ ಮತ್ತಿತರ ಅಧಿಕಾರಿ-ಸಿಬ್ಬಂದಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA