ಸರಗೂರು: ಪಟ್ಟಣದ ಅಂಚೆ ಕಚೇರಿಯಲ್ಲಿ ಸಿಬ್ಬಂದಿಯೊಬ್ಬರು ಖಾತೆದಾರರ ನಕಲಿ ಸಹಿ ಬಳಸಿ, ಒಂದು ಕೋಟಿಗೂ ಹೆಚ್ಚು ರೂ.ಗಳ ಅಧಿಕ ಮೊತ್ತದ ಹಣ ಲಪಟಾಯಿಸಿರುವ ಸಂಬಂಧ ಖಾತೆದಾರರು ದೂರು ನೀಡಿ ನಾಲ್ಕು ತಿಂಗಳುಗಳೇ ಕಳೆದರೂ ಠೇವಣಿ ಹಣ ಕೊಡಿಸಿಲ್ಲ ಎಂದು ಆರೋಪಿಸಿ ಖಾತೆದಾರರು ಪ್ರತಿಭಟನೆ ನಡೆಸಿದರು.
ಪಟ್ಟಣದ ಒಂದನೇ ಮುಖ್ಯ ರಸ್ತೆಯ ಎಸ್ ಬಿಐ ಬ್ಯಾಂಕ್ ಕಚೇರಿ ಪಕ್ಕದಲ್ಲಿರುವ ಅಂಚೆ ಕಚೇರಿಗೆ ಮುತ್ತಿಗೆ ಹಾಕಿದ ಖಾತೆದಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಕಚೇರಿಗೆ ಬೀಗ ಜಡಿದು, ಸಿಬ್ಬಂದಿಯನ್ನು ಹೊರಹಾಕಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು. ಅಂಚೆ ಕಚೇರಿಯಲ್ಲಿನ ಅಂಚೆ ಶಾಖಾ ಪಾಲಕ(ಪೋಸ್ಟಲ್ ಅಸಿಸ್ಟೆಂಟ್) ದೀಪಕ್ ಎಂಬುವವರು ಅಂಚೆ ಕಚೇರಿಯ ವಿವಿಧ ಖಾತೆಗಳಿಂದ ನಕಲಿ ಸಹಿ ಬಳಸಿ, ಲಕ್ಷಾಂತರ ರೂ. ಲೂಟಿ ಮಾಡಿದ್ದಾನೆ ಎಂದು ಹಣ ಕಳೆದುಕೊಂಡ ಖಾತೆದಾರರುಗಳು ದೂರಿದ್ದಾರೆ. ಪ್ರಕರಣ ಬೆಳಕಿಗೆ ಬಂದು ಹಲವು ತಿಂಗಳುಗಳೇ ಕಳೆದಿವೆ. ಹಣ ಲಪಟಾಯಿಸಿರುವವರ ವಿರುದ್ಧ ದೂರು ನೀಡಿದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಅಂಚೆ ಕಚೇರಿಯ ಉಳಿತಾಯ ಖಾತೆಯಿಂದ ಹಣ ಹಿಂಪಾವತಿಯ ಮೇಲೆ ಖಾತೆದಾರರ ನಕಲಿ ಸಹಿ ಮಾಡಿ ಹಣ ಪಡೆದಿದ್ದಾರೆ ಅದಲ್ಲದೆ ಗ್ಯಾರಂಟಿ ಯೋಜನೆ ಹಣವನ್ನು ಖಾತೆದಾರರಿಂದ ಹಣ ಜಮಾ ಮಾಡಲು ತೆಗೆದುಕೊಂಡು ಅದನ್ನು ಸಹ ಬಳಸಿಕೊಂಡು ಖಾತೆದಾರರ ಪುಸ್ತಕದಲ್ಲಿ ಮುದ್ರೆ ಹಾಕಿ ಸಹಿ ಮಾಡಿ ಕೊಟ್ಟಿದ್ದಾರೆ. ಆದರೆ ಈ ಕುರಿತು ಕಚೇರಿಯ ಪುಸ್ತಕದಲ್ಲಿ ಯಾವುದೇ ವಿವರ ನಮೂದು ಮಾಡಿಲ್ಲ. ಇದನ್ನು ಪ್ರಶ್ನಿಸಿದರೆ ಅಂಚೆ ಕಚೇರಿಯ ಅಧಿಕಾರಿಗಳು ಕೆಲವೊಂದು ಫಾರಂಗೆ ಸಹಿ ಮಾಡಿಸಿಕೊಂಡು ವಾರ ಬಿಟ್ಟು ಬನ್ನಿ ಎಂದು ಸಬೂಬು ಹೇಳುತ್ತಿದ್ದಾರೆ. ಸರ್ವರ್ ಬಿಸಿ ನಾಳೆ ಬನ್ನಿ ಎಂದು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನು ಯಾರು ಮಾಡಿದ್ದಾರೆ ಅವರನ್ನು ತಕ್ಷಣ ಪತ್ತೆ ಹಚ್ಚಿ ಕೂಡಲೇ ಖಾತೆದಾರರಿಗೆ ಅವರ ಠೇವಣಿ ಹಣವನ್ನು ಬಡ್ಡಿ ಸಮೇತ ಕೊಡಿಸಬೇಕು. ನಕಲಿ ಸಹಿ ಮಾಡಿ ಕೋಟ್ಯಾಂತರ ರೂಗಳನ್ನು ದೋಚಿರುವ ವ್ಯಕ್ತಿಗಳು ಸೇರಿದಂತೆ ಪ್ರಕರಣದಲ್ಲಿ ಶಾಮೀಲಾಗಿರುವ ಉನ್ನತ ಅಧಿಕಾರಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರು ಒಬ್ಬ ವ್ಯಕ್ತಿಯನ್ನು ನೋಡಿ ಹಣ ಕಟ್ಟಿರುವುದಿಲ್ಲ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಪೋಸ್ಟ್ ಆಫೀಸ್ ಅನ್ನು ನಂಬಿ ಹಣ ಕಟ್ಟಿರುತ್ತಾರೆ. ಈ ಸಂಬಂಧ ಮದುವೆ ಮುಂಜಿಗಳಿಗೆ ಹಣ ಇಟ್ಟಿದ್ದು ಈಗ ಅದು ಇಲ್ಲವಾಗಿದೆ. ಈ ಹಣ ನಮಗೆ ಬರದೇ ಇದ್ದರೆ ನಾವುಗಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೆಲ ಗ್ರಾಹಕರುಗಳು ಎಚ್ಚರಿಕೆ ನೀಡಿದರು. ಹಾಗೂ ಈ ಸಂಬಂಧ ಸರಗೂರು ಅಂಚೆ ಕಚೇರಿಯಲ್ಲಿ ಕೆಲ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟಿದ್ದಾರೆ. ಈ ಸಂಬಂಧ ಮೈಸೂರು ಜಿಲ್ಲೆಯ ಅಂಚೆ ಕಚೇರಿಯ ಹಲವಾರು ಸಿಬ್ಬಂದಿಗಳು ಸರಗೂರಿನ ಅಂಚೆ ಕಚೇರಿಗೆ ಬಂದು ಪರಿಶೀಲಿಸಿ ಇಲ್ಲಿನ ಮನೆ ಮನೆಗೆ ಹೋಗಿ ನಿಮ್ಮ ಖಾತೆಗಳನ್ನು ದೃಢಪಡಿಸಿಕೊಳ್ಳಿ ಎಂದು ಒತ್ತಾಯಿಸಿದರು. ಸರಗೂರು ತಾಲೂಕಿನ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಸುಮಾರು ನಾಲ್ಕು ತಿಂಗಳು ಕಳೆದರೂ ಸಹ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಪ್ರತಿಭಟನೆಯಲ್ಲಿ ಖಾತೆದಾರರಾದ ಮುಳ್ಳೂರು ಲೋಕೇಶ್, ಮೆಡಿಕಲ್ ನೀತಿನ್ ಕುಮಾರ್, ಸರಗೂರು ಲೋಕೇಶ್, ಸುಂದರಮ್ಮ, ರಾಜೇಶ್, ನಾಗರಾಜ್, ಚೌಡಶೆಟ್ಟಿ, ಮಹೇಶ್, ವೆಂಕಟೇಶ್, ಅನಂತ ಶಯನ, ಜಯಮ್ಮ, ಸರೋಜಮ್ಮ, ಜಿ.ಬಿ.ಶಶಿಕಲಾ, ಜಗದೀಶ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹಣ ಕಳೆದು ಕೊಂಡ ನೊಂದ ಗ್ರಾಹಕರುಗಳು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC