ತುಮಕೂರು: ವೃದ್ಧೆಯನ್ನು ಕೊಲೆ ಮಾಡಿ, ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿಯನ್ನು ದೂರು ದಾಖಲಾದ 24 ತಾಸಿನೊಳಗೆ ಕುಣಿಗಲ್ ಉಪವಿಭಾಗದ ಪೊಲೀಸರು ಸೆರೆಹಿಡಿದಿದ್ದಾರೆ.
ಎಸ್ಪಿ ಕೆ.ವಿ.ಅಶೋಕ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಪ್ರಕರಣದ ಆರೋಪಿಯನ್ನು ಘಟನೆ ನಡೆದು 24 ಗಂಟೆಗಳೊಳಗೆ ಬಂಧಿಸಿರುವುದಾಗಿ ಅವರು ತಿಳಿಸಿದರು.
ಮುತ್ತುರಾಜ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸವಿದ್ದ ನಾಗಮ್ಮ ಎಂಬುವರ ಬಳಿ ಸಾಲ ಪಡೆದಿದ್ದ. ಸಾಲದ ಹಣ ತೀರಿಸುವಂತೆ ವೃದ್ಧೆ ನಾಗಮ್ಮ ಅವರು ಕೇಳುತ್ತಿದ್ದರಿಂದ ಹತ್ಯೆಗೆ ಸ್ಕೆಚ್ ಹಾಕಿ ಮಾ.9ರಂದು ರಾತ್ರಿ 7.30 ರಿಂದ 8ರ ಸಮಯದಲ್ಲಿ ಮನೆಗೆ ನುಗ್ಗಿ ವೃದ್ಧೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಹತ್ಯೆಯ ನಂತರ ಆಕೆ ಧರಿಸಿದ್ದ ಚಿನ್ನದ ಮಾಂಗಲ್ಯ ಸರ ಒಂದು ಜೊತೆ ಓಲೆ ಹಾಗೂ ನಾಲ್ಕು ಚಿನ್ನದ ಬಳೆಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದನು.
ಘಟನೆಯ ನಂತರ ಬೆಂಗಳೂರಿನಲ್ಲಿದ್ದ ಮೃತ ನಾಗಮ್ಮ ಅವರ ಪುತ್ರ ವರದರಾಜು ಅವರು ಮಾ.11ರಂದು ಹುಲಿಯೂರುದುರ್ಗ ಠಾಣೆಗೆ ನೀಡಿದ್ದರು. ಈ ದೂರನ್ನಾಧರಿಸಿ ಅಪರಾಧ ಪತ್ತೆ ತಂಡವನ್ನು ರಚಿಸಲಾಯಿತು. ದೂರು ನೀಡಿದ 24 ತಾಸಿನೊಳಗೆ ಆರೋಪಿಯನ್ನು ತನಿಖಾ ತಂಡ ಪತ್ತೆ ಹಚ್ಚಿ ಸೆರೆ ಹಿಡಿದಿದೆ.
ಬಂಧಿತ ಆರೋಪಿಯಿಂದ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ ಸೇರಿದಂತೆ ವೃದ್ಧೆಯಿಂದ ಕಸಿದುಕೊಂಡಿದ್ದ ನಾಲ್ಕು ಚಿನ್ನದ ಬಳೆ, ಮಾಂಗಲ್ಯ ಸರ, ಓಲೆ ಸೇರಿ 79 ಗ್ರಾಂ ತೂಕದ 11 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ಇನ್ನೂ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯಾಚರಣೆಗೆ ಎಸ್ಪಿ ಕೆ.ವಿ.ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು. ತನಿಖಾ ತಂಡದಲ್ಲಿ ಎಎಸ್ಪಿಗಳಾದ ಸಿ.ಗೋಪಾಲ್, ಎಂ.ಎಲ್. ಪುರುಷೋತ್ತಮ್ ನೇತೃತ್ವದಲ್ಲಿ ಕುಣಿಗಲ್ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಓಂಪ್ರಕಾಶ್ ಮಾರ್ಗದರ್ಶನದ ಮೇರೆಗೆ ಅಮೃತೂರು ವೃತ್ತ ನಿರೀಕ್ಷಕ ನವೀನ್ ಗೌಡ, ಕುಣಿಗಲ್, ಹುಲಿಯೂರುದುರ್ಗ ಪಿಎಸ್ ಐಗಳಾದ ಮಾದಾನಾಯ್ಕ, ಪ್ರಶಾಂತ್ ಟಿ.ಎಸ್. ಎಎಸ್ ಐ ಗಂಗರಾಜು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ತನಿಖಾ ತಂಡದ ಪೊಲೀಸರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


