ತುಮಕೂರು : ನಗರದ ತಿಲಕ್ ಪಾರ್ಕ್ ಪೊಲೀಸರು ಪತ್ರಕರ್ತನ ಸೋಗಿನಲ್ಲಿ ಗಾಂಜಾ ಸಾಗಿಸುತ್ತಿದ್ದವನನ್ನು ಬಂಧಿಸಿ ಒಂದು ಕಾರು, ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಶೈಕ್ಷಣಿಕ ನಗರಿ ತುಮಕೂರು ನಗರದಲ್ಲಿ ಇತ್ತೀಚೆಗೆ ಗಾಂಜಾ, ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಅನ್ನೋ ಆರೋಪ ಪದೇ ಪದೇ ಕೇಳಿಬರ್ತಾನೆ ಇದೆ. ನಗರದಲ್ಲಿ ಗಾಂಜಾ ದಂಧೆಕೋರರು ಹೆಚ್ಚಾಗಿದ್ದು, ಬೇರೆ ಬೇರೆ ರೂಪದಲ್ಲಿ ಅವುಗಳನ್ನ ಮಾರಾಟ ಮಾಡ್ತಿದ್ದಾರೆ.
ಹೀಗಾಗಿ ನಿಷೇಧಿತ ಗಾಂಜಾ ಮತ್ತು ಡ್ರಗ್ಸ್ ಸುಲಭವಾಗಿ ಯುವಕರ ಕೈ ಸೇರುತ್ತಿವೆ.
ಇದರಿಂದ ಅಹಿತಕರ ಘಟನೆಗಳು ನಡೆಯೋದು ಕೂಡ ಹೆಚ್ಚಾಗಿದ್ದು, ನಗರದ ಶಾಂತಿಗೆ ಧಕ್ಕೆಯುಂಟಾಗ್ತಿದೆ ಅಂತಾ ತುಮಕೂರಿನ ನಾಗರಿಕರು ಆರೋಪಿಸುತ್ತಿದ್ದರು. ಅದರಲ್ಲಿಯೂ ನಗರದ ತಿಲಕ್ ಪಾರ್ಕ್ ಮತ್ತು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೇ ಈ ರೀತಿ ಪ್ರಕರಣಗಳು ಬೆಳಕಿಗೆ ಬರ್ತಿದ್ವು. ಹೀಗಾಗಿ ಇಂತಹ ಕ್ರಿಮಿಗಳನ್ನ ಮಟ್ಟಹಾಕಬೇಕು ಅಂತಾ ಪೊಲೀಸರು ಪಣತೊಟ್ಟಿದ್ದು, ಇದೀಗ ತಿಲಕ್ ಪಾರ್ಕ್ ಪೊಲೀಸರು ಭರ್ಜರಿ ಭೇಟೆಯನ್ನೇ ಆಡಿದ್ದಾರೆ.
ಪತ್ರಕರ್ತನ ಸೋಗಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ದಂಧೆಕೋರನನ್ನ ಖೆಡ್ಡಾಗೆ ಕೆಡವುವಲ್ಲಿ ತಿಲಕ್ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ತನ್ನ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ತಿಲಕ್ ಪಾರ್ಕ್ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಈ ಮಾಹಿತಿಯನ್ನ ಆಧರಿಸಿ ಪೊಲೀಸರು ಕಾರ್ಯೋನ್ಮುಖರಾಗಿದ್ರು. ತುಮಕೂರು ನಗರದ ರಿಂಗ್ ರಸ್ತೆ ಸಮೀಪದಲ್ಲಿರುವ ಗಂಗಾಧರ ನಗರ ಬಳಿ ಇಂದು ಬೆಳಿಗ್ಗೆಯಿಂದಲೇ ಹೊಂಚು ಹಾಕಿ ಕುಳಿತಿದ್ರು. ಮಾಹಿತಿಯಂತೆಯೇ ಮದ್ಯಾಹ್ನದ ಹೊತ್ತಿಗೆ ಗಾಂಜಾ ಸಾಗಿಸುತ್ತಿದ್ದ ಕಾರು ಗಂಗಾಧರ ನಗರಕ್ಕೆ ಎಂಟ್ರಿಕೊಟ್ಟಿತ್ತು. ತಕ್ಷಣವೇ ಅಲರ್ಟ್ ಆದ ಪೊಲೀಸರು ಕಾರನ್ನು ಅಡ್ಡಗಟ್ಟಿ, ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ರವಿ ಎಂಬಾತನನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ಪೊಲೀಸರು ಬರೋಬ್ಬರಿ ಒಂದು ಕೆ.ಜಿ 250 ಗ್ರಾಂ ತೂಕದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಗಾಂಜಾ ಸಾಗಿಸುತ್ತಿದ್ದ ಕಾರನ್ನ ಕೂಡ ವಶಪಡಿಸಿಕೊಳ್ಳಲಾಗಿದೆ. ಇನ್ನು ಈ ಬಂಧಿತ ಆರೋಪಿ ಯಾರಿಗೂ ಅನುಮಾನ ಬರಬಾರದು ಅನ್ನೋ ಕಾರಣಕ್ಕೆ ಕಾರಿನ ಮೇಲೆ ಪ್ರೆಸ್ ಅಂತ ಸ್ಟಿಕ್ಕರ್ ಕೂಡ ಹಾಕಿಸಿಕೊಂಡಿರೋದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ತಿಲಕ್ ಪಾರ್ಕ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx