ಬೆಂಗಳೂರು: ಪ್ರವಾಸ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ರಾವ್ ಬಂಧಿತ ಆರೋಪಿಯಾಗಿದ್ದಾನೆ. ಪಾಂಚಜನ್ಯ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ನಿಂದ ಅಯೋಧ್ಯೆ, ಕಾಶಿ, ಪ್ರಯಾಗ್ ರಾಜ್ , ವಾರಣಾಸಿ ಸೇರಿದಂತೆ ವಿವಿಧ ತೀರ್ಥ ಕ್ಷೇತ್ರಗಳಿಗೆ 14 ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಈತ ಫೇಸ್ ಬುಕ್ ನಲ್ಲಿ ಜಾಹೀರಾತು ನೀಡಿ, ಜನರನ್ನು ಸೆಳೆದಿದ್ದ.
ಇದನ್ನು ನಂಬಿದ ಜನರು ಆತನನ್ನು ಸಂಪರ್ಕಿಸಿದಾಗ 7 ದಿನಗಳ ಪ್ಯಾಕೇಜ್ ಗೆ ತಲಾ 49 ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದು, 100ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಹಣಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲವರಿಗೆ ಟಿಕೆಟ್ ಬುಕ್ ಮಾಡಿ, ನಂತರ ರದ್ದು ಮಾಡಿದ್ದಾನೆ. ರದ್ದು ಮಾಡಿದ ಬಳಿಕ ವಾಪಸ್ ಆದ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ. ಇನ್ನು ಕೆಲವರಿಗೆ, ಪ್ರಯಾಗ್ ರಾಜ್ಗೆ ಯಾತ್ರಿಕರು ತಲುಪಿದ ನಂತರ ಅವರ ರಿಟರ್ನ್ ಟಿಕೆಟ್ ರದ್ದು ಮಾಡಿದ್ದಾನೆ. ವಾಪಸ್ ಆದ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ 20 ಕ್ಕೂ ಹೆಚ್ಚು ಜನರು ದೂರು ನೀಡಿದ್ದಾರೆ. ಆರೋಪಿಯು ವಂಚಿಸಿದ ಹಣದಲ್ಲಿ ಬೆಟ್ಟಿಂಗ್ ಆ್ಯಪ್ ಗಳಲ್ಲಿ ಆಟವಾಡಿ ಹಣ ಕಳೆದುಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4