ಲಕ್ನೋ: ಆಟವಾಡುತ್ತಿದ್ದ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ ವೃದ್ಧನೋರ್ವ ಪೊಲೀಸರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಫರೀದ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 60 ವರ್ಷ ವಯಸ್ಸಿನ ಶೇಕ್ ಮೊಹಮ್ಮದ್ ಎಂಬಾತ ಕೃತ್ಯ ಎಸಗಿದ ವ್ಯಕ್ತಿಯಾಗಿದ್ದಾನೆ.
ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದು, ಹೀಗಾಗಿ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೊಹಮ್ಮದ್ ನ ಮನೆಯಲ್ಲಿ ಬಾಲಕಿಯನ್ನು ಬಲವಂತವಾಗಿ ಆರೋಪಿ ಅತ್ಯಾಚಾರ ಎಸಗುತ್ತಿರುವುದು ಕಂಡು ಬಂದಿದೆ. ಬಾಲಕಿಯು ರಕ್ತಸಿಕ್ತ ಸ್ಥಿತಿಯಲ್ಲಿರುವ ದೃಶ್ಯ ಪೋಷಕರನ್ನು ಬೆಚ್ಚಿಬೀಳಿಸಿದೆ. ಬಾಲಕಿಯ ಪೋಷಕರನ್ನು ಕಂಡ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಪೋಷಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ ವೇಳೆ ಆರೋಪಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೊಲೀಸರ ಭೀತಿ ಅಥವಾ ತಾನು ಮಾಡಿದ ಕೃತ್ಯದ ಪಶ್ಚಾತಾಪದಿಂದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


