ತಿಪಟೂರು : ನಮ್ಮ ಪೂರ್ವಜರು ಜಾತ್ರೆ, ಉತ್ಸವ, ಹಬ್ಬ ಮೊದಲಾದ ಆಚರಣೆಗಳ ಮೂಲಕ ಸಂಘ ಜೀವನದ ಸಾಮರಸ್ಯಗಳನ್ನು, ಬಂಧು ಬಾಂದವರ ಬಾಂಧವ್ಯಗಳನ್ನು, ಸಂಸ್ಕøತಿ, ಆಚಾರ-ವಿಚಾರ, ಸುಖ, ಶಾಂತಿ, ನೆಮ್ಮದಿಯನ್ನು ಕಾಣುತ್ತಿದ್ದರು ಎಂದು ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀಚೌಡೇಶ್ವರಿ ದೇವಿ ದೇವಾಲಯದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಶ್ರೀಚೌಡೇಶ್ವರಿ ದೇವಿ ದೇವಾಲಯ ಆವರಣದಲ್ಲಿ ಬುಧವಾರ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶ್ರೀಮಠ ಮತ್ತು ದಸರೀಘಟ್ಟ ಗ್ರಾಮಸ್ಥರು ಸಹಯೋಗದಲ್ಲಿ ನಡೆದ ರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಸಂಸಾರದ ಸಾಗರದಲ್ಲಿ ಸಹ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಠಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ಮನುಷ್ಯನಲ್ಲಿ ಕಷ್ಟಕಾರ್ಪಣ್ಯಗಳು ದೂರವಾಗಲು ಭಗವಂತನ ನಾಮಸ್ಮರಣೆ ಅತಿಮುಖ್ಯವಾಗಿದೆ. ಹಿರಿಯರಲ್ಲಿ ಗೌರವ, ಗುರುಗಳಲ್ಲಿ ಭಕ್ತಿ ಭಾವಗಳನ್ನು ಬೆಳೆಸಿಕೊಂಡು ಇಳಿವಯಸ್ಸಿನ ತಂದೆ-ತಾಯಿಗಳಿಗೆ ಆಸರೆಯಾಗಿರುತ್ತಿದ್ದರು. ನಾಗರೀಕತೆ ಬೆಳೆದಂತೆ ಜನಶೈಲಿಗಳು ಬದಲಾಗಿ ಕುಟುಂಬಗಳು ಒಡೆದು ನೆಮ್ಮದಿಯನ್ನು ಕಳೆದುಕೊಂಡು ನರಳಾಡುತ್ತಿದ್ದಾರೆ. ಮಾನವೀಯತೆ ಮತ್ತು ಜೀವನ ಮೌಲ್ಯಗಳು ಮಾಯವಾಗುತ್ತಿವೆ. ಆದುದರಿಂದ ನಾವೆಲ್ಲರೂ ದೇವರು, ಧರ್ಮ, ಆಚಾರ, ನೈತಿಕತೆಗಳಲ್ಲಿ ನಂಬಿಕೆಯಿರಿಸಿ, ಪೂಜೆ, ಪ್ರಾರ್ಥನೆಗಳಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಚ್ಛಾರಿತ್ರ್ಯವುಳ್ಳವರಾಗಬೇಕು. ಅಂತರಂಗ, ಬಹಿರಂಗ ಗಳೆರಡರಲ್ಲೂ ಪರಿಶುದ್ಧತೆಯನ್ನು ಕಂಡುಕೊಂಡು ಭೇದಗಳನ್ನು ಮರೆತು ಒಂದೇ ಕುಟುಂಬದವರಂತೆ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸಿ ಜೀವನದಲ್ಲಿ ಮುಕ್ತಿಯನ್ನು ಕಂಡುಕೊಳ್ಳಬೇಕು. ಪರೋಪಕಾರ, ಸಮಾಜಸೇವೆಗಳಂತಹ ಸತ್ಕಾರ್ಯಗಳಲ್ಲಿ ಸಕ್ರಿಯರಾಗಿ ಸಾರ್ಥಕ್ಯವನ್ನು ಕಂಡುಕೊಂಡು ಭಗವಂತನ ಕೃಪಾಕಟಾಕ್ಷ್ಯಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ, ಕಬ್ಬಳ್ಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಹುಬ್ಬಳ್ಳಿ ಮಠದ ಕುಮಾರ ಸ್ವಾಮೀಜಿ, ಮಾಜಿ ಶಾಸಕ ಕೆ.ಷಡಕ್ಷರಿ, ಚಲನಚಿತ್ರ ನಟಿ ಪ್ರೇಮಾ, ನಿರ್ದೇಶಕ ಪುರುಷೋತ್ತಮ ಸೇರಿದಂತೆ ದಸರಿಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5