ಕಳೆದ ತಿಂಗಳು ಯುವತಿ ಮೇಲೆ ಆಸಿಡ್ ಎರಚಿ ವಿಕೃತಿ ಮೆರೆದು ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್, ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಾಧ್ಯಮಗಳಲ್ಲಿ ಈತ ಮೊದ ಮೊದಲು ಸೌಮ್ಯ ಸ್ವಭಾವದವನು ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತಾದರೂ, ಆ ಬಳಿಕ ಈತನ ಅಸಲಿತನ ಬಯಲಾಗಿದೆ.
ನಾಗೇಶ್ ನನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಬೆಂಗಳೂರಿಗೆ ಬರುವ ಮೊದಲೇ ತಮಿಳುನಾಡಿನಲ್ಲಿ ತನ್ನ ನೆರೆಹೊರೆಯ ಮಹಿಳೆಯರು ಸೇರಿದಂತೆ ಹಲವು ಮಹಿಳೆಯರಿಗೆ ಕಿರುಕುಳ ನೀಡಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊಡಿಯಾಲಂ ಮೂಲದ ನಾಗೇಶ್ ತನ್ನ ನೆರೆಯ ಮಹಿಳೆಗೆ ಕಿರುಕುಳ ನೀಡಿದ್ದು, ಅಲ್ಲಿನ ಪೊಲೀಸರಿಗೆ ತಿಳಿಸಲಾಗಿತ್ತು. ಆದರೆ, ಮಹಿಳೆ ದೂರು ನೀಡದ ಕಾರಣ ಆತನನ್ನು ಕರೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು ಎಂದು ತಿಳಿದುಬಂದಿದೆ.
ಈ ಮಧ್ಯೆ ನಾಗೇಶ್ ಬಂಧಿಸಲು ರಚಿಸಲಾದ 10ಪೊಲೀಸ್ ತಂಡಗಳು ಪ್ರಮುಖ ಯಾತ್ರಾ ಕೇಂದ್ರಗಳ ಎಲ್ಲಾ ಹೋಟೆಲ್ ಗಳಲ್ಲಿ ಶೋಧ ನಡೆಸಿದ್ದರು. ಅಲ್ಲದೇ ಆತನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸುವ ಕೆಲವನ್ನೂ ನಡೆಸಿದ್ದರು.
ನಾಗೇಶ್ ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಆಶಾ ಅವರ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ. ಆಶಾಗೆ ಕಿರುಕುಳ ನೀಡಿದ ಬಳಿಕ ಮನೆ ಖಾಲಿ ಮಾಡುವಂತೆ ಹೇಳಿದ್ದರು. ನಂತರ ಎರಡು ವರ್ಷಗಳ ಹಿಂದೆ ತನ್ನ ಊರಿಗೆ ಬಂದು ನೆರೆಮನೆಯವರಿಗೆ ಕಿರುಕುಳ ನೀಡತೊಡಗಿದ. ಅಲ್ಲಿನ ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಬೆಂಗಳೂರಿಗೆ ಹಿಂತಿರುಗಿ ಮತ್ತೆ ಆಶಾ ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ.
ವರದಿ: ಆಂಟೋನಿ, ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


