ತಾಯಿ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಇಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ತಾಯಿ ಹಾಗೂ ಅವಳಿ ಶಿಶುಗಳು ಮೃತಪಟ್ಟ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.
ಭಾರತೀನಗರದ ಅಭಯ ಆಂಜನೇಯ ದೇವಸ್ಥಾನದ ಬಳಿ ಕಳೆದ ಒಂದು ತಿಂಗಳಿನಿಂದ ವಾಸವಿದ್ದ ತಮಿಳುನಾಡು ಮೂಲದ ಗರ್ಭಿಣಿ ಕಸ್ತೂರಿ (30) ಹಾಗೂ ಅವಳಿ ಮಕ್ಕಳು ಮನೆಯಲ್ಲೇ ಹೆರಿಗೆ ವೇಳೆ ಮೃತಪಟ್ಟ ದುರ್ದೈವಿಗಳು. ಕಸ್ತೂರಿ ಗಂಡ ಇತ್ತೀಚೆಗಷ್ಟೇ ಮೃತಪಟ್ಟಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಬುಧವಾರ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ಕಸ್ತೂರಿ ತೆರಳಿದ್ದರು. ಆದರೆ ತಾಯಿಗೆ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ವಾಪಸ್ ಕಳುಹಿಸಲಾಗಿದೆ.
ಚಿಕಿತ್ಸೆ ದೊರೆಯದ ಕಾರಣ ಕಸ್ತೂರಿ ಮನೆಗೆ ಮರಳಿದ್ದು, ಗುರುವಾರ ರತ್ರಿ ಕಸ್ತೂರಿಗೆ ಮನೆಯಲ್ಲಿಯೇ ಹೆರಿಗೆ ಆಗಿದೆ. ಮನೆಯಲ್ಲೇ ಒಂದು ಮಗುವಿಗೆ ಜನ್ಮ ನೀಡಿದ್ದು, ಅದು ಸೂಕ್ತ ಚಿಕಿತ್ಸೆ ಇಲ್ಲದೇ ಮೃತಪಟ್ಟಿದೆ. ಕೆಲವೇ ಸಮಯದಲ್ಲಿ ಅತೀವ ರಕ್ತಸ್ರಾವ ಹಾಗೂ ಚಿಕಿತ್ಸೆ ಕೊರತೆಯಿಂದ ಮತ್ತೊಂದು ಮಗು ಹಾಗೂ ತಾಯಿ ಮೃತಪಟ್ಟಿದ್ದಾರೆ. ಬಾಣಂತಿ ಹಾಗೂ ಅವಳಿ ಮಕ್ಕಳ ಸಾವಿಗೆ ಕಾರಣವಾಗಿರುವ ಆರೋಗ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ತಪ್ಪಿತಸ್ಥರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿ.ಹೆಚ್.ಒ ಡಾ. ಮಂಜುನಾಥ್ ಹಾಗೂ ಡಾ. ವೀಣಾ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಮಂಜುನಾಥ್, ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದು ಕಂಡುಬಂದಿರುವುದರಿಂದ ಆ ವೇಳೆ ಕರ್ತವ್ಯದಲ್ಲಿದ್ದ ಡಾ.ಉಷಾ ಸೇರಿ ನರ್ಸ್ಗಳನ್ನು ಅಮಾನತುಗೊಳಿಸಲಾಗುವುದು. ತುರ್ತು ಸಂದರ್ಭದಲ್ಲಿ ದಾಖಲಾತಿ ಕೇಳುವ ಅಗತ್ಯ ಇಲ್ಲ. ಯಾವುದೇ ಮುಲಾಜಿಲ್ಲದೆ ಅವರನ್ನು ಅಮಾನತುಗೊಳಿಸಲಾಗುವುದು ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


