18ನೇ ಲೋಕಸಭೆಯ ಸ್ಪೀಕರ್ ಆಯ್ಕೆ ಮಂಗಳವಾರ ನಾಟಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿ ವಿರುದ್ಧ ಪ್ರತಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಇದರಿಂದಾಗಿ 1976ರ ಬಳಿಕ ಅಂದರೆ 48 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಲೋಕಸಭೆಯ ಮುಖ್ಯಸ್ಥ ಹುದ್ದೆಗೆ ಬುಧವಾರ ಬೆಳಗ್ಗೆ 11ಕ್ಕೆ ಚುನಾವಣೆ ನಡೆಯಲಿದೆ.
ಹೊಸ ಸಂಸತ್ತಿನಲ್ಲಿ ಆಸನಗಳ ಹಂಚಿಕೆ ಮುಗಿದಿಲ್ಲ ಹಾಗೂ ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆ ಕೂಡ ಜಾರಿಗೆ ಬಂದಿಲ್ಲ. ಬುಧವಾರ ಬೆಳಗ್ಗೆ 11ಕ್ಕೆ ಚೀಟಿ ಮೂಲಕ ಸಂಸದರು ಮತ ಚಲಾವಣೆ ಮಾಡಲಿದ್ದಾರೆ. ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಈವರೆಗೆ 2 ಬಾರಿ ಮಾತ್ರ ಚುನಾವಣೆ ನಡೆದಿವೆ.ಇದೀಗ ಮೂರನೇ ಬಾರಿಗೆ ಚುನಾವಣೆ ನಡೆಯುತ್ತಿದೆ.
ಮಿತ್ರಪಕ್ಷಗಳಾದ ತೆಲುಗುದೇಶಂ ಹಾಗೂ ಜೆಡಿಯು ಕಣ್ಣಿಟ್ಟಿದ್ದವು ಎಂದು ಹೇಳಲಾಗಿದ್ದ ಸ್ಪೀಕರ್ ಸ್ಥಾನವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, 17ನೇ ಲೋಕಸಭೆಯಲ್ಲಿ ಐದು ವರ್ಷಗಳ ಕಾಲ ಸ್ಪೀಕರ್ ಆಗಿದ್ದ ತನ್ನ ಸಂಸದ ಓಂ ಬಿರ್ಲಾ ಅವರನ್ನು ಎನ್ ಡಿಎ ಸ್ಪೀಕರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಈ ನಡುವೆ, ಸಂಪ್ರದಾಯದಂತೆ ಆಡಳಿತ ಪಕ್ಷದವರು ಸ್ಪೀಕರ್ ಹುದ್ದೆ ಅಲಂಕರಿಸಿದರೆ ಪ್ರತಿಪಕ್ಷದವರನ್ನು ಉಪಸ್ಪೀಕರ್ ಮಾಡಬೇಕು ಎಂದು ಇಂಡಿಯಾ ಷರತ್ತು ಇಟ್ಟಿತಾದರೂ, ಅದಕ್ಕೆ ಸರ್ಕಾರ ಒಪ್ಪಿಲ್ಲ. ಹೀಗಾಗಿ ಹಿರಿಯ ಸಂಸದ ಕೋಡಿಕುನ್ನಿಲ್ ಸುರೇಶ್ ಅವರು ‘ಇಂಡಿಯಾ’ ಅಭ್ಯರ್ಥಿಯಾಗಿದ್ದಾರೆ.
ಎನ್ ಡಿಎ ಕೂಟಕ್ಕೆ ಬಹುಮತ ಇರುವ ಹಿನ್ನೆಲೆಯಲ್ಲಿ ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


