ತುಮಕೂರು: ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಮೆಡಿಕಲ್ ಹಾಗೂ ಇನ್ನಿತರ ವಿದ್ಯಾರ್ಥಿಗಳ ಬಸ್ ಪಾಸಿನ ಅವಧಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವವರೆಗೂ ವಿಸ್ತರಿಸಲು ಆಗ್ರಹಿಸಿ AIDSO ತುಮಕೂರು ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡರು, ರಾಜ್ಯದ ಎರಡನೇ ಮತ್ತು ಮೂರನೇ ವರ್ಷದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪಾಸ್ ಅನ್ನು ಸೆಪ್ಟಂಬರ್ 2021ರಲ್ಲಿ ನೀಡಲಾಗಿತ್ತು. ಆದರೆ ಅವರ ತರಗತಿಗಳು ನವೆಂಬರ್ ನಲ್ಲಿ ಆರಂಭವಾಗಿತ್ತು. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 2021ರಲ್ಲಿ ನೀಡಲಾಗಿತ್ತು. ವಿದ್ಯಾರ್ಥಿ ಬಸ್ ಪಾಸಿಗೆ ಅವರ ಶೈಕ್ಷಣಿಕ ವರ್ಷದ ಕೊನೆಯವರೆಗೂ ಮಾನ್ಯತೆ ಇರುತ್ತದೆ. ಇದು ಇಷ್ಟು ವರ್ಷಗಳವರೆಗೂ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಅಂದರೆ, ನವೆಂಬರ್ ನಲ್ಲಿ ತರಗತಿ ಆರಂಭದ ನಂತರ ಪಾಸ್ ಪಡೆದ ವಿದ್ಯಾರ್ಥಿಗಳು ಆಗಸ್ಟ್ ನವರೆಗೂ, ಡಿಸೆಂಬರ್ ನಲ್ಲಿ ಪಾಸ್ ಪಡೆದ ವಿದ್ಯಾರ್ಥಿಗಳು ಸೆಪ್ಟಂಬರ್ ವರೆಗೂ ಉಚಿತವಾಗಿ ಓಡಾಡಬಹುದು. ಜೂನ್ ತಿಂಗಳಿಗೆ ವಿದ್ಯಾರ್ಥಿ ಬಸ್ ಪಾಸಿನ ಅವಧಿಯು ಕೊನೆಗೊಳ್ಳಲಿರುವುದರಿಂದ ಮುಂದಿನ ತಿಂಗಳಿನಿಂದ ಹಣ ಪಾವತಿಸಿ ಓಡಾಡಬೇಕು ಎಂದು ಸಾರಿಗೆ ನಿಗಮ ಹೇಳಿದೆ ಎಂದರು.
AIDSO ನ ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಮಾತಾಡಿ, ಮೊದಲನೆಯದಾಗಿ, ಹಲವು ವರ್ಷಗಳ ಹೋರಾಟದ ಫಲವಾಗಿ ವಿದ್ಯಾರ್ಥಿಗಳು ರಿಯಾಯಿತಿ ಪಾಸ್ ಅನ್ನು ಪಡೆದುಕೊಂಡಿದ್ದೇವೆ. ವಾಸ್ತವವಾಗಿ, ನಮ್ಮ ಹೋರಾಟ ಉಚಿತ ಪಾಸ್ ನೀಡಬೇಕು ಎಂಬುದೇ ಆಗಿದೆ. ಹೀಗಿರುವಾಗ, ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ, ಪಾಸ್ ನ ಮಾನ್ಯತೆ ರದ್ದಾಗಿದೆ. ದುಡ್ಡು ಕೊಟ್ಟು ಓಡಾಡಬೇಕು ಎಂಬುದು ವಿದ್ಯಾರ್ಥಿ ವಿರೋಧಿ ನೀತಿ ಎಂದರು.
ಈಗಾಗಲೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಬಸ್ ಪಾಸಿನ ಅವಧಿಯನ್ನು ಆಗಸ್ಟ್ ನವರೆಗೆ ವಿಸ್ತರಣೆ ಮಾಡಿದೆ. ಇದನ್ನೇ ತುಮಕೂರು ಜಿಲ್ಲಾ ಸಾರಿಗೆ ಸಂಸ್ಥೆಗಳು ಅನುಸರಿಸಬೇಕು ಮತ್ತು ರಾಜ್ಯ ಸಾರಿಗೆ ಸಹ, ವಿದ್ಯಾರ್ಥಿಗಳು ಪ್ರಯಾಣ ಮಾಡಲು ಅನುಕೂಲವಾಗುವಂತೆ ಪಾಸಿನ ಅವಧಿ ವಿಸ್ತರಣೆ ಮಾಡಬೇಕು ಮತ್ತು ಪಾಸ್ ಮುಂದುವರಿಕೆಗೆ ಈಗಾಗಲೇ ಪಾವತಿಸಿದ ಹಣವನ್ನು ಮರು ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.
ವರದಿ: ಲಕ್ಕಪ್ಪ, AIDSO ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz