- ಜೆ.ರಂಗನಾಥ, ತುಮಕೂರು
ಅಕ್ಕಿರಾಂಪುರ ಐತಿಹಾಸಿಕ ತಾಣ, ಜಯಮಂಗಲಿ, ಸುವರ್ಣಮುಖಿ ಹಾಗೂ ರೌಪ್ಯ ಮುಖಿ ನದಿಗಳ ತ್ರಿವೇಣಿ ಸಂಗಮದ ತಾಣ. ಸುವರ್ಣಮುಖಿ ನದಿಯ ಬಲ ದಂಡೆಯ ಜೈನ ಕ್ಷೇತ್ರ ಶ್ರೀ ಅನಂತನಾಥ ತೀರ್ಥಂಕರ ಸನ್ನಿಧಿ.
ಶ್ರೀ ಆನಂತ ನಾಥ ತೀರ್ಥಂಕರರು ಜೈನ ಧರ್ಮದ 14ನೇ ತೀರ್ಥಂಕರರಾಗಿದ್ದು, ಯಕ್ಷ ಪಾತಾಳ ,ಯಕ್ಷಿ ಅನಂತಮತಿಯರಾಗಿದ್ದು, ಇವರ ಲಾಂಛನ ಕರಡಿಯಾಗಿದೆ. ಈ ಬಸದಿ ಗರ್ಭಗುಡಿ , ಸುಖನಾಸಿ, ನವರಂಗ, ಮುಖ ಮಂಟಪ, ಪ್ರದಕ್ಷಿಣ ಪಥ ಹೊಂದಿದ್ದು ಉತ್ತರ ಅಭಿಮುಖವಾಗಿದೆ ಬಸದಿಯೊಳಗೆ ಕಂಬ ಶಿಲ್ಪಗಳು, ಹೆಚ್ಚಾಗಿ ಕಮಲ ದಳಗಳಿಂದ ಕೂಡಿರುವುದು ವಿಶೇಷವಾಗಿದೆ. ಅಲ್ಲದೆ ನವರಂಗದ ಪ್ರವೇಶ ದ್ವಾರ ಹಾಗೂ ಸುಖನಾಸಿ ಪ್ರವೇಶ ದ್ವಾರದಲ್ಲಿ ಜಯ –ವಿಜಯರು , ಲಲಾಟದಲ್ಲಿ ತೀರ್ಥಂಕರರು ಹಾಗೂ ಉತ್ತಮ ಬಾಗಿಲು ವಾರ್ಡಗಳನ್ನು ಹೊಂದಿದ್ದು, ಗರ್ಭಗುಡಿ ಪ್ರವೇಶ ದ್ವಾರದಲ್ಲಿ ಬಳ್ಳಿ ವರಸೆ ಚಿತ್ರಗಳನ್ನು ಹೊಂದಿದ್ದು, ಲಲಾಟದಲ್ಲಿ ಗಜಲಕ್ಷ್ಮಿ ಇರುವುದು ವಿಶೇಷ. ಗರ್ಭಗುಡಿಯಲ್ಲಿ ಮೂರು ಅಡಿಗಳ ಎತ್ತರದ ಶ್ರೀ ಅನಂತನಾಥ ತೀರ್ಥಂಕರರ ಖಡ್ಗಾಸನ ಮೂರ್ತಿ ಇದೆ.
ಈ ಪ್ರದೇಶದಲ್ಲಿ ಮೂರು ನದಿಗಳು ಹರಿಯುತ್ತಿದ್ದರಿಂದ ಭತ್ತವನ್ನು ಹೆಚ್ಚಾಗಿ ಬೆಳೆಯುತ್ತಿದ್ದರು ,ಇದರಿಂದ ಅಕ್ಕಿ ತಯಾರಿಸುತ್ತಿದ್ದರಿಂದ ಈಗ ಅಕ್ಕಿ ರಾಂಪುರವಾಗಿದೆ. ಇಲ್ಲಿನ ಹಲವಾರು ದೇಗುಲಗಳನ್ನು ರಾಮ ಎನ್ನುವ ವ್ಯಕ್ತಿ ನಿರ್ಮಿಸಿದ್ದರಿಂದ ಈ ಪುರ ಈಗ ಅಕ್ಕಿರಾಮಪುರವಾಗಿದೆ.
ಅಕ್ಕಿರಾಂಪುರದ ಶ್ರೀ ಅನಂತನಾಥ ಜಿನಾಲಯವನ್ನು ಕ್ರಿ.ಶ 1651 ರಲ್ಲಿ ನಿರ್ಮಾಣಮಾಡಲಾಗಿದೆ. ಈ ಬಸದಿ ಯನ್ನು ಮೈಸೂರು ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಅಪ್ರಕಟಿತ ಶಾಸನವು ಬಸದಿಯ ಗೋಡೆಯಲ್ಲಿ ಪತ್ತೆಯಾಗಿದ್ದು ಶಾಸನವು 2 ಸಾಲುಗಳಿವೆ.
ಶಾಸನದ ಸಾರಾಂಶ:
ಪ್ರಮ ದೋತಾ ಸಂವತ್ಸರ ಚೈತ್ರ 10 ಗುರಿ ಮಾಡಿ ನಾಗಿ ಶೆಟ್ಟಿಯ ಮಗ ಚಿಕ್ಕ ಮಾಳಯ್ಯ ಕಾಲವಾದಾಗ ,ಅವರ ಅಣ್ಣ ಮಾಳಯ್ಯ ಧರ್ಮಕ್ಕೆ ಹತ್ತು ಕೊಳಗ( ಅಳತೆ ಮಾಪನ) ದಾನ ಮಾಡಿದರು ಎಂದು ಶಾಸನ ತಿಳಿಸುತ್ತದೆ.
ಬಸದಿ ಎದುರು ಸುಮಾರು 14 ಅಡಿ ಎತ್ತರದ ಮನೋಸ್ಥಂಭವಿದ್ದು ,ಇದನ್ನು ಗುಪ್ತ ನಿಧಿಯಿಂದ ನಿರ್ಮಿಸಲಾಗಿದೆ. ಮಾನಸ್ತಂಭ ದ ಮೇಲೆ ಚತುರ್ಮುಖ ಬಿಂಬಗಳು ಖಡ್ಗಾಸನ ರೂಪದಲ್ಲಿರುವುದು ವಿಶೇಷ .ಇದಕೆ 2012 ರಲ್ಲಿ ಪ್ರತಿಷ್ಠಾಪನ ಗೋಪುರದ ಕಳಸ ಸ್ಥಾಪನೆ ಹಾಗೂ ಧಾಮ ಸಂಪ್ರೋಕ್ಷನೋತ್ಸವ ನಡೆಸಲಾಗಿದೆ.
ಬಸದಿಗೆ ಪ್ರವೇಶ ದ್ವಾರ ಗೋಪುರದ ಮಾದರಿಯ ಮಂಟಪವಿದು ಇದರ ಪ್ರಭಾವಳಿಯಲ್ಲಿ ತೀರ್ಥಂಕರರನ್ನು ನಿರ್ಮಿಸಲಾಗಿದೆ ಬಸದಿಯ ಮುಖ ಮಂಟಪ ಇಳಿಜಾರಿನಿಂದ ಕುಡಿದು ಇದು ಮಲೆನಾಡು ಕರಾವಳಿ ಮಾದರಿಯಲ್ಲಿದು, ಇದನ್ನ ವಿಸ್ತರಿಸಿ ಮುಂದೆ ಕಟ್ಟಡ ನಿರ್ಮಿಸಲಾಗಿದ್ದು ಅದರ ಮುಂಭಾಗದ ಪ್ರಭಾವಳಿಯಲ್ಲಿ ಮಾತೆ ಪದ್ಮಾವತಿ ಶ್ರೀ ಅನಂತಮತಿ ಹಾಗೂ ಶ್ರುತದೇವಿ ಯನ್ನು ಪ್ರತಿಷ್ಠಾಪಿಸಲಾಗಿದೆ. ಬಸದಿಯಲ್ಲಿ ಪುರಾತನ ಬ್ರಹ್ಮ ದೇವರ ಕಂಬವಿದ್ದು, ಇದಕ್ಕೆ ಮೆಟ್ಟಿಲುಗಳನ್ನು ಗುಬ್ಬಿಯ ಶ್ರಾವಕ ಜಿ.ಸಿ .ಬ್ರಹ್ಮದೇವ್- ಪದ್ಮಿನಿ ಹೆಚ.ವಿ. ದಂಪತಿಗಳು 1999ರ ಸೆಪ್ಟೆಂಬರ್ 2 ರಂದು ನಿರ್ಮಿಸಿ ಕೊಟ್ಟಿದ್ದಾರೆ .ಬಸದಿ ಬಲಭಾಗ ನಾಗಬನವಿದ್ದು, ,2001ರಲ್ಲಿ ತ್ಯಾಗಿ ನಿವಾಸ, ಅತಿಥಿ ಗೃಹ, ಅರ್ಚಕರ ನಿವಾಸಗಳನ್ನು ನಿರ್ಮಿಸಲಾಗಿದ್ದು , 2013ರ ಏಪ್ರಿಲ್ ನಲ್ಲಿ ಚಂದ್ರ ಶಾಲೆಯನ್ನು ಉದ್ಘಾಟಿಸಿದ್ದಾರೆ.
ಶ್ರೀ ಕ್ಷೇತ್ರ ಅಕ್ಕಿ ರಾಂಪುರ ಶ್ರೀ ಅನಂತನಾಥ ತೀರ್ಥಂಕರ ಜೈನ ಬಸದಿ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಆಡಳಿತ ವ್ಯಾಪ್ತಿಗೆ ಸೇರಿದೆ . ಈ ಬಸದಿಯ ಗರ್ಭಗುಡಿ ಗೋಪುರ ನಾಲ್ಕು ದಿಕ್ಕುಗಳಲ್ಲಿ ,ನಾಲ್ಕು ಜನ ತೀರ್ಥಂಕರ ಶಿಲ್ಪಗಳಿದ್ದು ಸ್ವಸ್ತಿಕ್ ,ದಂಡಶಿಲ್ಪ ,ಓಂ ಹಾಗೂ ತ್ರಿಲೋಕ್ ಚಿತ್ರಗಳನ್ನ ಕಳಸ ಗಳ ಸಮೇತ ಚಿತ್ರಿಸಲಾಗಿದೆ. ಈ ಬಸದಿ ತುಂಬಾ ಪುರಾತನವಾದದ್ದು ಎಂಬುದಕ್ಕೆ ಬಸದಿಯ ರಕ್ಷಣೆಗೆ ಸುತ್ತಲೂ ಬಲವಾಗಿ ನಿರ್ಮಿಸಲಾಗಿರುವ ಪುರಾತನವಾದ ರಕ್ಷಣಾ ಗೋಡೆ ಸಾಕ್ಷಿಯಾಗಿದೆ.
ಶ್ರೀ ಅನಂತನಾಥ ತೀರ್ಥಂಕರ ಬಸದಿಯನ್ನು 1978, 1995, 2002 ಹಾಗೂ 2009 ರಲ್ಲಿ ಬಸದಿಯನ್ನು ಜೀರ್ಣೋದ್ಧಾರ ಮಾಡಿ ಪಂಚ ಕಲ್ಯಾಣಗಳನ್ನ ನೆರವೇರಿಸಲಾಗಿದೆ.
450 ವರ್ಷಗಳ ಇತಿಹಾಸವಿರುವ ಈ ಜೈನಬಸದಿಯ ಜೀರ್ಣೋದ್ಧಾರ ಕಾರ್ಯ 2000 ರಲ್ಲಿ ಪ್ರಾರಂಭವಾಗಿ 12 ವರ್ಷಗಳನ್ನು ತೆಗೆದುಕೊಂಡಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.
ಈ ಐತಿಹಾಸಿಕ ಆಕ್ಕಿರಾಮಪುರ ಶ್ರೀ ಅನಂತನಾಥ ಜೈನ ಬಸದಿ, ರಾಜಧಾನಿ ಬೆಂಗಳೂರಿನಿಂದ 97 ಕಿ.ಮೀ, ಜಿಲ್ಲಾ ಕೇಂದ್ರ ತುಮಕೂರಿನಿಂದ 36 ಕಿ.ಮೀ., ತಾಲೂಕು ಕೇಂದ್ರ ಕೊರಟಗೆರೆಯಿಂದ 10 ಕಿ.ಮೀ. ಹಾಗೂ ಹೋಬಳಿ ಕೇಂದ್ರ ಹೊಳವನಹಳ್ಳಿಯಿಂದ 5 ಕಿ.ಮೀ ದೂರವಿದೆ.
ತುಮಕೂರು ಜಿಲ್ಲೆ ,ಕೊರಟಗೆರೆ ತಾಲೂಕಿನ ,ಹೊಳವನಹಳ್ಳಿ ಹೋಬಳಿ ,ಅಕ್ಕಿರಾo ಪುರದ ಶ್ರೀ ಅನಂತನಾಥ ಜೈನ ಬಸದಿ ಮತ್ತು ಬ್ರಹ್ಮ ಯಕ್ಷರ ವಾರ್ಷಿಕ ಪೂಜಾ ಮಹೋತ್ಸವ 2025 ಜನವರಿ 12ರಂದು ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx