ಪ್ರೀತಿಸಿ ಮದುವೆಯಾಗಿರುವ ತಮ್ಮ ಆನಂದ್ ಚಾಲಕನಾಗಿದ್ದು ಇತ್ತೀಚೆಗೆ ಕಾಣೆಯಾಗಿದ್ದಾನೆಂದು ಸೋದರ ವೆಂಕಟೇಶ್ ಮಾಲೂರು ತಾಲೂಕು ಮಾಸ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಬೆನ್ನತ್ತಿ ಹೋದ ಪೊಲೀಸರಿಗೆ ಈ ನಾಪತ್ತೆ ಪ್ರಕರಣದ ಸುಳಿವು ಆರಂಭದಲ್ಲಿ ಸಿಗಲಿಲ್ಲ.
ದೂರು ನೀಡಿದ್ದ ವೆಂಕಟೇಶ್ ಮತ್ತೆ ಠಾಣೆಗೆ ಹೋಗಿ ಕಾಣೆಯಾಗಿದ್ದ ಆನಂದ್ ಪತ್ನಿ ಹಾಗೂ ಆಕೆಯ ಕೆಲವು ಸ್ನೇಹಿತರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟರಲ್ಲಿ ಹೊಸಕೋಟೆ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಮಾಕನಹಳ್ಳಿ ಗ್ರಾಮದ ಬಳಿಯ ನೀರಿನ ಹಳ್ಳದಲ್ಲಿ ಕೊಲೆ ಮಾಡಿ ಬಿಸಾಡಿದ್ದ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಪರಿಶೀಲಿಸಿದಾಗ ಆನಂದ್ ಕೊಲೆಯಾಗಿರುವುದು ಖಚಿತವಾಗಿದೆ.
ಆನಂದ್ ಅಣ್ಣ ವೆಂಕಟೇಶ್ ಅನುಮಾನ ವ್ಯಕ್ತಪಡಿಸಿದ್ದಂತೆ ಆತನ ಪತ್ನಿ ಚೈತ್ರಾ ಸೇರಿದಂತೆ ಆಕೆಯ ಮೂರು ಸ್ನೇಹಿತರನ್ನು ವಶಕ್ಕೆ ಪಡೆದ ನಂದಗುಡಿ ಪೊಲೀಸರು ವಿಚಾರಣೆ ನಡೆಸಿದ ವೇಳೆ ಆಕೆಯೇ ಪ್ರಿಯಕನ ಜೊತೆಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ.
ಡ್ರೈವರ್ ಆನಂದ್ ಕಾರಂಗುಟ್ಟೆ ಗ್ರಾಮದ ಚೈತ್ರಾ ಎಂಬ ಹುಡುಗಿಯನ್ನು ಪ್ರೀತಿಸಿ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಇದ್ದರು. ಚೈತ್ರಾ ಕಳೆದ ಒಂದೂವರೆ ವರ್ಷದಿಂದ ಪಕ್ಕದ ಮನೆಯ ಚಲಪತಿ ಎಂಬುವನ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಅದು ಆನಂದ್ಗೆ ಹೇಗೋ ಇತ್ತೀಚೆಗೆ ಗೊತ್ತಾಗಿತ್ತು.
ಈ ವಿಚಾರವಾಗಿ ಗಲಾಟೆ ಕೂಡಾ ನಡೆದಿತ್ತು. ಹೀಗಾಗಿ ಚೈತ್ರಾ ತನ್ನ ಪ್ರಿಯಕರ ಚಲಪತಿಗೆ ಆನಂದ್ನನ್ನು ಮುಗಿಸಿಬಿಡಲು ತಿಳಿಸಿದ್ದಾಳೆ. ಚಲಪತಿ ಸ್ನೇಹಿತರಾದ ಪೃಥ್ವಿರಾಜ್ ಹಾಗೂ ನವೀನ್ ಸಹಾಯ ಪಡೆದು ನವೆಂಬರ್ 21 ರಂದು ಆನಂದ್ಗೆ ಕರೆ ಮಾಡಿ ಕೆಲಸ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಚೆನ್ನಾಗಿ ಕುಡಿಸಿ ಕೊಲೆ ಮಾಡಿ ನಂತರ ಶವವನ್ನು ಹೊಸಕೋಟೆ ಬಿ. ಮಾಕನಹಳ್ಳಿ ಬಳಿ ಕ್ವಾರಿ ಹಳ್ಳವೊಂದರಲ್ಲಿ ಕಲ್ಲುಕಟ್ಟಿ ಬಿಸಾಡಿ ಬಂದಿದ್ದರು.
ಕೆಲವು ದಿನಗಳ ನಂತರ ಶವ ನೀರಿನಲ್ಲಿ ತೇಲಿದೆ. ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ನಂದಗುಡಿ ಪೊಲೀಸರಿಗೆ ತನಿಖೆ ವೇಳೆ ಆನಂದ್ನನ್ನು ಪತ್ನಿ ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿರುವುದು ಗೊತ್ತಾಗಿದೆ. ಆರೋಪಿಗಳಾದ ಚೈತ್ರಾ, ಚಲಪತಿ, ನವೀನ್ ಹಾಗೂ ಪೃಥ್ವಿರಾಜ್ನನ್ನು ಬಂಧಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


