ತುಮಕೂರು: ಮಹಿಳೆಯರು ಶಿಕ್ಷಣದ ಜೊತೆಗೆ, ಆರ್ಥಿಕ ಸ್ವಾವಲಂಬನೆ ಬೆಳೆಸಿಕೊಳ್ಳಬೇಕು. ಪದವಿ, ಸ್ನಾತಕೋತ್ತರ ಪದವಿ ನಂತರ ಮನೆಯಲ್ಲಿಯೇ ಕುಳಿತುಕೊಳ್ಳದೆ ತನ್ನ ಅರ್ಹತೆಗೆ ತಕ್ಕಂತೆ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರಾದ ನೂರುನ್ನಿಸಾ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಪರಿವರ್ತನಾ ವಾದ ತುಮಕೂರು ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಭಾರತದ ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆಗಳು ಎಂಬ ವಿಚಾರ ಸಂಕಿರಣವನ್ನು ಅಂಬೇಡ್ಕರ್ ಮತ್ತು ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೋಗ ಪಡೆದರೆ, ಇನ್ನೊಬ್ಬರ ಮೇಲೆ ಅವಲಂಬನೆಯಾಗುವುದು ತಪ್ಪುತ್ತದೆ. ಸ್ವಾವಲಂಬಿ ಬದುಕು ಸಾಧ್ಯ ಎಂದರು.
ಭಾರತದ ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆಗಳು ಎಂಬ ವಿಚಾರ ಕುರಿತು ಮಾತನಾಡಿದ ತುಮಕೂರು ವಿವಿ ಇಂಗ್ಲಿಷ್ ವಿಷಯದ ಪ್ರಾಧ್ಯಾಪಕಿ ಡಾ. ಜ್ಯೋತಿ, ಮಹಿಳೆಯರು, ದಲಿತರು ಅಕ್ಷರ ಕಲಿತರೆ ಸಾಮಾಜಿಕ ಬಹಿಷ್ಕಾರದಂತಹ ಶಿಕ್ಷೆಗೆ ಗುರಿಪಡಿಸುತ್ತಿದ್ದ ಕಾಲದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆದು, ಸತ್ಯ ಶೋಧನಾ ಸಮಾಜ ಸಂಘಟನೆಯ ಮೂಲಕ ವರದಕ್ಷಿಣೆ ವಿರೋಧ ವೇದಿಕೆ, ಕಾರ್ಮಿಕರಿಗಾಗಿ ರಾತ್ರಿ ಶಾಲೆ, ಸರಳ ವಿವಾಹ, ಮಹಿಳಾ ಸೇವಾ ಮಂಡಳಿ, ಬಾಲ್ಯ ವಿವಾಹ, ಭ್ರೂಣ ಹತ್ಯೆ, ಶಿಶುವಿಹಾರ, ಸಾಮೂಹಿಕ ಭೋಜನದಂತಹ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟರು ಎಂದರು.
ಆರ್.ಎಂ.ಓ ಡಾ. ಅಶೋಕ್ ಟಿ.ಬಿ. ಮಾತನಾಡಿ, ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಸಾವಿತ್ರಿಬಾಯಿ ಫುಲೆ ಅವರದ್ದು ಮರೆಯಲಾಗದ ಸಾಧನೆ. ಶಿಕ್ಷಣದ ಜೊತೆಗೆ, ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಓಮಂತರಾಜು ವಹಿಸಿದ್ದರು. ವೇದಿಕೆಯಲ್ಲಿ ದಸಂಸ ಪರಿವರ್ತನಾ ವಾದದ ರಾಜ್ಯ ಪ್ರಧಾನ ಸಂಚಾಲಕ ಗೋವಿಂದರಾಜ್ ಎಂ., ಪಿ.ಎನ್. ರಾಮಯ್ಯ, ಡಾ. ಲಕ್ಷ್ಮಿ ರಂಗಯ್ಯ, ಹೆಗ್ಗರೆ ಕೃಷ್ಣಪ್ಪ, ಯಲ್ಲಪ್ಪ ಸಿದ್ದಾಪುರ, ನಳಿನಮ್ಮ ಸಿಂಗನಹಳ್ಳಿ, ಛಲವಾದಿ ಶೇಖರ್, ವಿಜಯಲಕ್ಷ್ಮಿ, ಭಾಗ್ಯ, ಸಿದ್ದಲಿಂಗಯ್ಯ ಗಾಡಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


