ಪುಣೆಯ ಹೊರವಲಯದಲ್ಲಿರುವ ಹೋಟೆಲ್ ವೊಂದರಲ್ಲಿ ಶನಿವಾರ ರಾತ್ರಿ ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಟೆಕ್ಕಿಯನ್ನು ಆಕೆಯ ಗೆಳೆಯನೇ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಆರೋಪಿಯಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಂಪ್ರಿ ಚಿಂಚ್ ವಾಡದ ಹಿಂಜೆವಾರಿ ಪ್ರದೇಶದ ಓಯೋ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹೋಟೆಲ್ ಗೆ ಆಗಮಿಸಿ ಮಹಿಳೆಯ ಶವವನ್ನು ಹೊರತೆಗೆದರು. ಶವ ನೆಲದ ಮೇಲೆ ಬಿದ್ದಿದ್ದು, ಕೋಣೆಯಲ್ಲಿ ರಕ್ತದ ಕಲೆಗಳು ಕಂಡುಬಂದಿವೆ.
ಪೊಲೀಸರ ಪ್ರಕಾರ, ಮಹಿಳೆಯನ್ನು ವಂದನಾ ದ್ವಿವೇದಿ ಎಂದು ಗುರುತಿಸಲಾಗಿದೆ ಮತ್ತು ಆಕೆಯ ಗೆಳೆಯ ರಿಷಬ್ ನಿಗಮ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೂಲತಃ ಉತ್ತರ ಪ್ರದೇಶದವರು. ಇವರಿಬ್ಬರ ನಡುವೆ ಪರಸ್ಪರ ಸಂಬಂಧವಿದ್ದು, ಜಗಳವೇ ಕೊಲೆಗೆ ಕಾರಣ ಎಂಬುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ಈ ದುರಂತ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಆರೋಪಿಯನ್ನು ಈಗ ವಿಚಾರಣೆ ನಡೆಸಲಾಗುತ್ತಿದೆ.
ಹೋಟೆಲ್ ನ ಸಿಸಿಟಿವಿ ಫೂಟೇಜ್ ನಲ್ಲಿ ರಿಷಬ್ ತಡರಾತ್ರಿ ಕೋಣೆಯಿಂದ ಹೊರಬರುವುದನ್ನು ಕಾಣಬಹುದು. ಪೊಲೀಸರು ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸಿದರು ಬಳಿಕ ಆತ ಸಿಕ್ಕಿಬಿದ್ದಿದ್ದಾನೆ. ಕೊಲೆ ಮಾಡಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪಿಂಪ್ರಿ ಚಿಂಚ್ವಾಡ್ ಪೊಲೀಸರು ತಿಳಿಸಿದ್ದಾರೆ.
ಈ ಹೋಟೆಲ್ ರೂಂ ಬುಕಿಂಗ್ ಅನ್ನು ವಂದನಾ ಮತ್ತು ರಿಷಭ್ ಹೆಸರಿನಲ್ಲಿ ಮಾಡಲಾಗಿದ್ದರಿಂದ ಆತನ ಮೇಲೆ ಅನುಮಾನ ಹೆಚ್ಚಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಶಾಲ್ ಹಿರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯ ವಂದನಾಳ ಶವ ಪತ್ತೆಯಾದ ಹೋಟೆಲ್ ಕೋಣೆಗೆ ಪೊಲೀಸರು ಸೀಲ್ ಹಾಕಿದ್ದಾರೆ ಮತ್ತು ರಿಷಬ್, ಅವರನ್ನು ಕೊಲ್ಲಲು ಬಳಸಿದ್ದ ಗನ್ ಎಲ್ಲಿಂದ ಬಂತು ಅನ್ನೋ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.


