ತುಮಕೂರು: ಜಿಲ್ಲಾ ವಕೀಲರ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷರಾದ ದೊಡ್ಡಮನೆ ಗೋಪಾಲಗೌಡರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಅವರು, ಎಲ್ಲ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಿಕೊಟ್ಟ ಮಹಾನ್ ಪುರುಷ , ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೆ ವಸ್ತುವನ್ನಾಗಿ ನೋಡುತ್ತಿದ್ದ ಕಾಲದಲ್ಲಿ, ಎಲ್ಲರನ್ನು ಮನುಷ್ಯರನ್ನಾಗಿ ನೋಡುವ ರೀತಿ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿಕೊಟ್ಟ ಮಹಾನ್ ಪುರುಷರು ಎಂದು ತಿಳಿಸಿದರು.
ಸಂವಿಧಾನದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಉತ್ತುಂಗದಲ್ಲಿರಿಸಿದ ವ್ಯಕ್ತಿ ಬಾಬಾ ಸಾಹೇಬರು ಎಂದರೆ ತಪ್ಪಾಗಲಾರದು. ಭಾರತವು 75 ವರ್ಷಗಳಿಂದಲೂ ಯಾವುದೇ ಸಮಸ್ಯೆಯಿಲ್ಲದೆ ಆಡಳಿತ ವ್ಯವಸ್ಥೆ ನಡೆಸುತ್ತಿದೆ ಎಂದರೆ, ನಮ್ಮ ಸಂವಿಧಾನದ ಶಕ್ತಿ ಎಂಥಹದು ಎಂದು ತಿಳಿಯುತ್ತದೆ ಎಂದು ತಿಳಿಸಿದರು.
ನಮ್ಮ ಸಂವಿಧಾನದ ಮೂಲಕ ಶೋಷಿತ ಸಮಾಜಕ್ಕೆ ನ್ಯಾಯ ಒದಗಿಸಿದ ವ್ಯಕ್ತಿ ಅಂಬೇಡ್ಕರ್ ಆಗಿದ್ದು, ಅವರು ಮಹಾನ್ ರಾಷ್ಟೀಯವಾದಿ ಎಂದ ಅವರು, ಅಂಬೇಡ್ಕರ್ ಅವರನ್ನು ಫೋಟೋ ಇಟ್ಟು ಪೂಜೆ ಮಾಡದೆ, ಅವರ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಹಿರಿಯ ವಕೀಲರಾದ ಹೇಮಸಧಾರೆಡ್ಡಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಡಾ.ಬಾಬಾ ಸಾಹೇಬರ ಆಶಯ ಇಂದು ಅಧಃಪತನದ ಹಾದಿಯತ್ತ ಸಾಗುತ್ತಿದ್ದು, ಇಂದಿನ ಕಾಲಘಟ್ಟದಲ್ಲಿ ಬಾಬಾ ಸಾಹೇಬರು ಬದುಕಿದ್ದಿದ್ದರೆ, ತುಂಬಾ ನೊಂದುಕೊಳ್ಳುತ್ತಿದ್ದರು. ಎಂದು ಕಳವಳ ವ್ಯಕ್ತಪಡಿಸಿದರು. ಇಂದು ಯಾವುದೇ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ವ್ಯಕ್ತಿ ಇದ್ದಾರೆಂದರೆ ಅವರು ಬಾಬಾ ಸಾಹೇಬರು ಮಾತ್ರ ಎಂದು ತಿಳಿಸಿದರು.
ಹಿರಿಯ ವಕೀಲರಾದ ದಾಸಪ್ಪನವರು PTCL ವಿಷಯದ ಬಗ್ಗೆ ಅರಿವು ಮೂಡಿಸುವ ಮಾತನಾಡಿ, ಅಂಬೇಡ್ಕರ್ ಕೇವಲ ಕೆಲ ಜಾತಿಯವರರಿಗೆ ನ್ಯಾಯ ಒದಗಿಸಿಲ್ಲ, ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದ ಶಕ್ತಿ ಎಂದು ತಿಳಿಸಿದರು.
ವಕೀಲರಾದ ರಂಗಧಾಮಯ್ಯ ಮಾತನಾಡಿ, ಪುರುಷ ಸಮಾಜದ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಸಾಮಾಜಿಕ ನ್ಯಾಯ ಒದಗಿಸಿದ ಏಕಮಾತ್ರ ವ್ಯಕ್ತಿ ಎಂದರೆ, ಬಾಬಾ ಸಾಹೇಬರು ಮಾತ್ರ, ಮತದಾನದ ಹಕ್ಕನ್ನು ಕೊಡಿಸಿದ ಮಹಾತ್ಮರು ಬಾಬಾಸಾಹೇಬರು ಎಂದರು.
ವಕೀಲರಾದ ಜಿ. ನರಸಿಂಹಮೂರ್ತಿರವರು ಬಾಬಾ ಸಾಹೇಬರ ಬಗ್ಗೆ ಬರೆದ ಸ್ವ ರಚಿತಾ ಕಾವ್ಯ ವಾಚನದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿಯಾದ ಹಿಮಾನಂದ್ ಮಾಡಿದರು. ಸ್ವಾಗತವನ್ನು ಸಂಘದ ಉಪಾಧ್ಯಕ್ಷರಾದ ವೆಂಕಟೇಶ್ ಕೆ.ಸಿ. ಮಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕಾರಿ ಮಂಡಳಿ ಸದಸ್ಯರು, ವಕೀಲರು ಹಾಜರಿದ್ದರು.
ವರದಿ: ಶಿವಕುಮಾರ್, ಮೇಸ್ಟ್ರುಮನೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy