ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾ.ಪಂ. ಅಧ್ಯಕ್ಷರಾಗಿ ಅಮೃತ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾ.ಪಂ. ಅಧ್ಯಕ್ಷೆ ರಂಗಮ್ಮ ರಾಜಣ್ಣ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಅಮೃತ ಮಂಜುನಾಥ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ನೂತನ ಗ್ರಾ.ಪಂ. ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಘೋಷಣೆ ಮಾಡಿದರು.
ಗ್ರಾ.ಪಂ. ನೂತನ ಅಧ್ಯಕ್ಷೆ ಅಮೃತ ಮಂಜುನಾಥ್ ಮಾತನಾಡಿ, ರಾಜ್ಯದ ಗೃಹ ಸಚಿವರು ಮತ್ತು ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ರವರ ಆಶೀರ್ವಾದದಿಂದ ಮತ್ತು ಹುಲಿಕುಂಟೆ ಗ್ರಾ.ಪಂ. ಎಲ್ಲಾ ಸದಸ್ಯರು ಪಕ್ಷಭೇದ ಮರೆತು ಅಧ್ಯಕ್ಷರಾಗಿ ನನ್ನನ್ನು ಅವಿರೋಧ ಆಯ್ಕೆ ಮಾಡಿದ್ದಾರೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.
ಜೆಡಿಎಸ್ ಅಧ್ಯಕ್ಷ ಕಾಮರಾಜು ಮಾತನಾಡಿ, ಹುಲಿಕುಂಟೆ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮೃತ ಮಂಜುನಾಥ್ ಅವರಿಗೆ ಅಭಿನಂದನೆಗಳು. ಎಲ್ಲಾ ಗ್ರಾಮಗಳಿಗೆ ಸರ್ಕಾರದ ಪ್ರತಿ ಸೌಲಭ್ಯವನ್ನು ಕಲ್ಪಿಸಿ ನಡೆಯುತ್ತಿರುವ ಅಭಿವೃದ್ಧಿ ಕಾಮಾಗಾರಿ ಪೂರ್ಣಗೊಳಿಸಿ ಮಾದರಿ ಗ್ರಾ.ಪಂಚಾಯ್ತಿಯನ್ನಾಗಿ ಮಾಡುವಂತೆ ಸಲಹೆ ನೀಡಿದರು.
ಗ್ರಾ.ಪಂ. ಸದಸ್ಯ ಮಲ್ಲಣ್ಣ ಮಾತನಾಡಿ, ಗೃಹ ಸಚಿವರ ಆಶೀರ್ವಾದದಿಂದ ಸರ್ವ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಅಮೃತ ಮಂಜುನಾಥ್ ಆಯ್ಕೆಯಾಗಿದ್ದು, ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲಭೂತ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕಡೆ ಗಮನಹರಿಸುವಂತೆ ತಿಳಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ರಂಗಮ್ಮ ರಾಜಣ್ಣ, ಉಪಾಧ್ಯಕ್ಷ ನಟರಾಜ್, ಪಿಡಿಒ ಮೈಲಣ್ಣ, ಸದಸ್ಯ ಡಿ.ಎಲ್.ಮಲ್ಲಣ್ಣ, ಜಿ.ಸಿ.ರಮೇಶ್, ಮಲ್ಲಿಕಾರ್ಜುನ್, ಬೈಲಾ ಕುಮಾರ್, ಶಾಂತಮ್ಮ, ನಾಗರತ್ನಮ್ಮ, ಗಂಗಾಧರ, ದಿವ್ಯಜ್ಯೋತಿ, ಪ್ರೇಮಾ, ಜಯಮ್ಮ ಸೇರಿದಂತೆ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


