ಸುಳ್ಳು ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದು ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕಂಡಿಷನ್ ಇಲ್ಲದೆ ಗ್ಯಾರಂಟಿ ಜಾರಿ ಮಾಡಲು ಆಗ್ರಹಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ಮನೆಮನೆಗೆ ಸಹಿ ಹಾಕಿದ ಗ್ಯಾರಂಟಿ ಕಾರ್ಡ್ ಗಳನ್ನು ಹಂಚುವ ಮೂಲಕ ಸುಳ್ಳು ಘೋಷಣೆಗಳ ಆಧಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇದೀಗ ಜನರಿಗೆ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.
ಸರಕಾರ ಬಂದು 24 ಗಂಟೆಗಳಲ್ಲಿ ಭರವಸೆ ಅನುಷ್ಠಾನಕ್ಕೆ ತರುವುದಾಗಿ ಹೇಳಿದವರು ಇದೀಗ ಸುಮಾರು 2 ತಿಂಗಳಾದರೂ ಸಮರ್ಪಕ ಮಾರ್ಗಸೂಚಿಯನ್ನೇ ನೀಡಿಲ್ಲ. ಗ್ಯಾರಂಟಿಗಳನ್ನು ಕಂಡಿಷನ್‌ಗಳೊಂದಿಗೆ ಜಾರಿ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. 10 ಕೆಜಿ ಅಕ್ಕಿ ಎಂದವರು ಇದೀಗ 5 ಕೆಜಿಗೆ ಹಣ ನೀಡುತ್ತಿದ್ದಾರೆ ಎಂದ ಅವರು, ಕೊಟ್ಟ ಮಾತಿನಂತೆ ನಡೆಯಿರಿ ಎಂದು ಆಗ್ರಹಿಸಿದರು. ವಿದ್ಯುತ್ ದರ ಇವತ್ತು ಹೊರೆಯಾಗಿದೆ ಎಂದರು. ವಿದ್ಯುತ್ ದರ ಇಳಿಸಿ ಹಿಂದಿನ ದರ ವಿಧಿಸಲು ಆಗ್ರಹಿಸಿದರು. ರಾಜ್ಯ ಸರಕಾರ ದ್ವೇಷದ ರಾಜಕೀಯ ಮಾಡುತ್ತಿದೆ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ರದ್ದು ಮಾಡುವುದನ್ನು ಅವರು ಖಂಡಿಸಿದರು. ಜನವಿರೋಧಿ ಸರಕಾರ ಇದೆಂದು ತಿಳಿಸಿದ ಅವರು, 5 ಭಾಗ್ಯಗಳನ್ನು ಮನೆಮನೆಗೆ ತಲುಪಿಸುವ ವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಾತನಾಡಿ, ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದು ಜನರನ್ನು ವಂಚಿಸಿದ ಸರಕಾರ ಇದು ಎಂದು ಟೀಕಿಸಿದರು. 10 ಕೆಜಿ ಅಕ್ಕಿ, ಜೊತೆಗೆ ಕೇಂದ್ರದಿಂದ ಕೊಡುವ 5 ಕೆಜಿ ಅಕ್ಕಿ ಸೇರಿ 15 ಕೆಜಿ ಅಕ್ಕಿ ಕೊಡಲೇಬೇಕು. 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲೇಬೇಕು. ನಿರುದ್ಯೋಗಿಗಳಿಗೆ ಷರತ್ತಿನಲ್ಲದೆ ಭತ್ಯೆ ಕೊಡಿ. ಗೃಹಿಣಿಗೆ 2 ಸಾವಿರ ರೂ. ಕೊಡಿ ಎಂದು ಆಗ್ರಹಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಅದರ ಪರಿಣಾಮ ಒಳ್ಳೆಯದಾಗುವುದಿಲ್ಲ. ಗ್ಯಾರಂಟಿ ಅನುಷ್ಠಾನ ಮಾಡಿ; ಇಲ್ಲವಾದರೆ ಅಧಿಕಾರ ಬಿಟ್ಟು ತೊಲಗಿ ಎಂದು ಎಚ್ಚರಿಕೆ ನೀಡಿದರು. ಜನವಿರೋಧಿ, ಭ್ರಷ್ಟ ಸರಕಾರದ ವಿರುದ್ಧ ನಿರಂತರ ಹೋರಾಟಕ್ಕೆ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಮಾತನಾಡಿ, ವಂಚನೆ ತನ್ನ ಹುಟ್ಟುಗುಣ ಎಂಬುದನ್ನು ಕಾಂಗ್ರೆಸ್ ಮತ್ತೆ ಸಾಬೀತುಪಡಿಸಿದೆ ಎಂದು ಟೀಕಿಸಿದರು. ಯುವ ನಾಯಕ ಬಿ. ವೈ. ವಿಜಯೇಂದ್ರ ಅವರು ಮಾತನಾಡಿ, ಇದು ಮಾತು ತಪ್ಪಿದ ದುಷ್ಟ ಸರಕಾರ ಎಂದು ಆರೋಪಿಸಿದರು. ಜನರ ಕಿವಿಗೆ ಹೂ ಮುಡಿಸುವ ಕೆಲಸವನ್ನು ಈ ಸರಕಾರ ಮಾಡಿದೆ ಎಂದು ಆಕ್ಷೇಪಿಸಿದರು. ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಮಾತನಾಡಿ, ಭ್ರಷ್ಟ, ಜನವಿರೋಧಿ ಸಿದ್ದರಾಮಯ್ಯ ಸರಕಾರವು ದೀರ್ಘ ಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ನುಡಿದರು. ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿದರು. ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾತನಾಡಿ, ಈ ಸರಕಾರದ ವಾರಂಟಿ ಡಿಸೆಂಬಲ್ವರೆಗೆ ಮಾತ್ರ. ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡುವುದಿಲ್ಲ; ಡಿ. ಕೆ. ಶಿವಕುಮಾರೆ ಕುರ್ಚಿ ಸಿಗುವುದಿಲ್ಲ ಎಂದು ನುಡಿದರು. ಗ್ಯಾರಂಟಿ ವಿಷಯದಲ್ಲಿ ಸರಕಾರ ಈಗ ಹೊಸ ನಾಟಕ ಮಾಡುತ್ತಿದೆ ಎಂದು ಟೀಕಿಸಿದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲಾಗದು ಎಂದು ನುಡಿದರು.
ಬೆಂಗಳೂರು ಮಹಾನಗರ ಬಿಜೆಪಿ ಘಟಕಗಳ ವತಿಯಿಂದ “ಸ್ವಾತಂತ್ರ್ಯ ಉದ್ಯಾನವನ”ದಲ್ಲಿ ಈ ಪ್ರತಿಭಟನೆ ನಡೆಯಿತು. ವಿದ್ಯುತ್ ದರ ಹೆಚ್ಚಳವನ್ನು ಯಥಾಸ್ಥಿತಿಗೆ ತರಬೇಕು; 10 ಕೆಜಿ ಅಕ್ಕಿ ಕೊಡುವ ಭರವಸೆಯನ್ನು ಯಥಾವತ್ ಜಾರಿ ಮಾಡಬೇಕು ಎಂದು ಆಗ್ರಹಿಸಲಾಯಿತು. ಕಾಂಗ್ರೆಸ್ ಸರಕಾರದ ಸುಳ್ಳು ಭರವಸೆಗಳ ವಿರುದ್ಧ ಘೋಷಣೆ ಕೂಗಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‌ಕುಮಾರ್ ಕಟೀಲ್, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ. ವಿ. ಸದಾನಂದಗೌಡ, ಸಂಸದ ಪಿ. ಸಿ. ಮೋಹನ್, ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಕೆ. ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಡಾ. ಅಶ್ವತ್ಥನಾರಾಯಣ್, ಮುರುಗೇಶ್ ನಿರಾಣಿ, ಬಿ. ಸಿ. ನಾಗೇಶ್, ಹಾಲಪ್ಪ ಆಚಾರ್, ಬಿ. ಸಿ. ಪಾಟೀಲ್, ನಾರಾಯಣಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಸಿದ್ದರಾಜು, ಯುವ ನಾಯಕ ಬಿ. ವೈ. ವಿಜಯೇಂದ್ರ, ಶಾಸಕರಾದ ಶಶೀಲ್ ನಮೋಶಿ, ತೇಜಸ್ವಿನಿ ಗೌಡ, ಮಾಜಿ ಶಾಸಕ ಎನ್. ಮಹೇಶ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ. ಲ. ನರೇಂದ್ರ ಬಾಬು, ಮುಖಂಡರಾದ ತಾರಾ ಅನುರಾಧಾ, ಎಸ್. ಕೆ. ಬೆಳ್ಳುಬ್ಬಿ, ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ಬೆಂಗಳೂರು ಮಹಾನಗರ ಜಿಲ್ಲಾ ಅಧ್ಯಕ್ಷರಾದ ಜಿ. ಮಂಜುನಾಥ್, ಎನ್. ಆರ್. ರಮೇಶ್, ನಾರಾಯಣ ಅವರು ಪಾಲ್ಗೊಂಡಿದ್ದರು. ಅನೇಕ ಮುಖಂಡರು ಮಾತನಾಡಿ ಸಿದ್ದರಾಮಯ್ಯರವರ ಸರಕಾರ ಜನತೆಗೆ ದ್ರೋಹ ಮಾಡಿದೆ ಎಂದು ಟೀಕಿಸಿದರು. ಭಾರತ್ ಮಾತಾ ಕಿ ಜೈ ಘೋಷಣೆ ಕೂಗಲಾಯಿತು. ಗ್ಯಾರಂಟಿಗಳನ್ನು ಪೂರೈಸದೆ ಇರುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


