ದಾವಣಗೆರೆ: ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಡಿಸಿಆರ್ ಬಿ ಪೊಲೀಸರ ಕಾರ್ಯಾಚಣೆ ನಡೆಸಿದಾಗ ಸಿಕ್ಕ ಖೋಟಾ ನೋಟುಗಳು. ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಓರ್ವ ಇಂಜಿನಿಯರ್ ಸೇರಿ ಆರು ಜನರ ಗ್ಯಾಂಗ್ ವೊಂದನ್ನ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಬರೋಬರಿ 7.70 ಲಕ್ಷ ರೂಪಾಯಿ ಮೌಲ್ಯದ ಐದು ನೂರು ಹಾಗೂ ಎರಡು ನೂರು ಮುಖಬೆಲೆಯ ಖೋಟಾ ನೋಟು ವಶಪಡಿಸಿಕೊಂಡಿದ್ದಾರೆ.
ಖೋಟಾ ನೋಟು ತಯಾರು ಮಾಡಲು ಬಳಸುತ್ತಿದ್ದ ಲ್ಯಾಪ್ ಟಾಪ್ ಸೇರಿ ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ವಶ ಪಡಿಸಿಕೊಂಡಿದ್ದಾರೆ. ದಾವಣಗೆರೆ ಮೂಲದ ಕುಬೇರಪ್ಪ ತಳವಾರ್, ಹರೀಶ್ ಗೌಡ, ಶಿವಮೊಗ್ಗದ ಭದ್ರಾವತಿ ಮೂಲದ ಇಂಜಿನಿಯರ್ ಜೆ. ರುದ್ರೇಶ್, ಮೈಸೂರಿನ ಮನೋಜ್ ಗೌಡ, ಮಂಡ್ಯದ ಸಂದೀಪ್ ಹಾಗೂ ಚಿತ್ರದುರ್ಗ ಮೂಲದ ಕೃಷ್ಣ ನಾಯ್ಕ ಬಂಧಿತ ಆರೋಪಿಗಳು.
ಇಂಜಿನಿಯರ್ ರುದ್ರೇಶ್ ಕೊರೊನಾ ದಲ್ಲಿ ಕೆಲಸ ಕಳೆದುಕೊಂಡು ಕೆಲ ತಿಂಗಳು ಕೋಳಿ ಫಾರ್ಮ್ ಇಟ್ಟುಕೊಂಡಿದ್ದ. ವಿಶೇಷವಾಗಿ ಮೈಸೂರಿನಲ್ಲಿ ರಿಸರ್ವ್ ಬ್ಯಾಂಕಿನ ನೋಟು ಮುದ್ರಣ ಘಟಕಕ್ಕೆ ಹತ್ತಿರದ ಕೂರಗಳ್ಳಿಮೇಗಲದಲ್ಲಿ ರೂಮ್ ಮಾಡಿಕೊಂಡಿದ್ದ. ರೂಮ್ ನಲ್ಲಿ ಈತ ನೈಜ ನೋಟು ಮುದ್ರಣ ಘಟಕಕ್ಕಿಂತಲೂ ಅದ್ಭುತವಾಗಿ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ. ಹೀಗೆ ಮುದ್ರಿಸಿದ ನೋಟುಗಳನ್ನು ಪೆಟ್ರೋಲ್ ಬಂಕ್ ಅಥವಾ ಚಿಲ್ಲರೆ ವ್ಯಾಪಾರಿಗಳಿಗೆ ನೀಡಿ ವಂಚನೆ ಮಾಡುತ್ತಿದ್ದರು.


