ಬೆಂಗಳೂರು: ಕಟ್ಟಡ ಕಾಮಗಾರಿ ವೇಳೆ 20 ಅಡಿ ಉದ್ಧದ ಕಬ್ಬಿಣದ ರಾಡ್ ತಲೆಗೆ ಹೊಕ್ಕಿ ಕಾರ್ಮಿಕ ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತ್ರಿಪುರಾದ ಅಗರ್ತಲಾ ಮೂಲದ 21 ವರ್ಷದ ಕಟ್ಟಡ ಕಾರ್ಮಿಕ ದೀಪಾಂಕರ್ ಚಾಸ ಎಂಬಾತ ದುರಂತ ಸಾವಿಗೀಡಾಗಿದ್ದಾನೆ.
ಸುಮಾರು 20 ಅಡಿ ಉದ್ದದ ಕಬ್ಬಿಣದ ರಾಡ್ 100 ಅಡಿ ಮೇಲಿಂದ ಆತನ ಮೇಲೆ ಬಿದ್ದಿದ್ದು ಈ ವೇಳೆ ರಾಡ್ ಆತನ ತಲೆಯೊಳಗೆ ಹೊಕ್ಕಿದೆ. ತೀವ್ರ ರಕ್ತಸ್ರಾವದಿಂದ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಮೃತ ಯುವಕನ ಚಿಕ್ಕಪ್ಪ ದುರಂತ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. “ಮೇಸ್ತ್ರಿ ಮೊಹಮ್ಮದ್ ಅತ್ತಾವುಲ್ಲಾ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವಿನ ಪ್ರಕರಣವನ್ನು ಶಂಕಿತರ ವಿರುದ್ಧ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


