ಸರಗೂರು: ವ್ಯಾಪ್ತಿಯ ಕಾಡಂಚಿನ ಭಾಗದಲ್ಲಿ ಹುಲಿ ದಾಳಿಯು ಮುಂದುವರಿದಿದ್ದು, ಹುಲಿ ಸೆರೆ ಕಾರ್ಯಾಚರಣೆ ನಡುವೆಯೇ ತಾಲೂಕಿನ ಕೂರ್ಣೇಗಾಲ ಸಮೀಪದ ಜಮೀನುವೊಂದರಲ್ಲಿ ದನಗಾಯಿ ರೈತನ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದಿದೆ.
ತಾಲೂಕಿನ ಕೂಡಗಿ ಗ್ರಾಮದ ರೈತ ದೊಡ್ಡ ನಿಂಗಯ್ಯ (55) ಹುಲಿ ದಾಳಿಗೆ ಬಲಿಯಾದ ಮೃತ ದುರ್ದೈವಿ. ಇತ್ತ ಮುಳ್ಳೂರು ಸಮೀಪದ ಬೆಣ್ಣೆಗೆರೆ ಬಳಿ ರೈತ ರಾಜಶೇಖರ್ ಎಂಬವರನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿರುವಾಗಲೇ ಕೂರ್ಣೆಗಾಲ ಬಳಿ ದೊಡ್ಡ ನಿಂಗಯ್ಯರನ್ನು ಹುಲಿ ಬಲಿ ಪಡೆದಿದೆ.
ದೊಡ್ಡ ನಿಂಗಯ್ಯ ಎಂದಿನಂತೆ ತಮ್ಮ ಸ್ವಗ್ರಾಮ ಕೂಡಗಿ ಸಮೀಪದ ಕೂರ್ಣೇಗಾಲದ ಜಮೀನುವೊಂದರಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದರು. ಸಂಜೆ ಸುಮಾರು 3.30ರ ವೇಳೆಗೆ ಜಾನುವಾರುಗಳನ್ನು ಕರೆದುಕೊಂಡು ಮನೆಗೆ ಹಿಂದಿರುಗುವ ವೇಳೆ ಏಕಾಏಕಿ ಹುಲಿಯೊಂದು ದಾಳಿ ನಡೆಸಿದ್ದು, ಅವರ ಕುತ್ತಿಗೆಯನ್ನು ಹಿಡಿದ ಪರಿಣಾಮ ದೊಡ್ಡ ನಿಂಗಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಜೊತೆಗಿದ್ದ ಉಳಿದಿಬ್ಬರ ಕೂಗಾಟದಿಂದ ಹುಲಿ ಮೃತದೇಹವನ್ನು ಬಿಟ್ಟು ಓಡಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಯಾಚರಣೆಯಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆಯೊಂದಿಗೆ ಮಾತಿನ ಚಕಮಕಿ:
ಇನ್ನು ಈ ಭಾಗದಲ್ಲಿ ನಿರಂತರ ಹುಲಿದಾಳಿಯಾಗಿ ರೈತರನ್ನು ಬಲಿಪಡೆಯುತ್ತಿದ್ದರೂ ಕಡಿವಾಣ ಹಾಕಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ದಾಳಿಯಾದಾಗಲೆಲ್ಲ ಪರಿಹಾರ ನೀಡಿ ಅರಣ್ಯ ಇಲಾಖೆ ಸುಮ್ಮನಾಗುತ್ತಿದೆ. ಕಾಡುಪ್ರಾಣಿಗಳ ದಾಳಿ ತಪ್ಪಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಸ್ಥಳಕ್ಕೆ ಕೂಡಲೇ ಸ್ಥಳೀಯ ಶಾಸಕರು ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಗಮಿಸಿ ಸೂಕ್ತ ಕ್ರಮಕೈಗೊಳ್ಳುವವರೆಗೂ ಮೃತದೇಹ ರವಾನಿಸಲು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟುಹಿಡಿದರು ಕುಳಿತಿದ್ದಾರೆ.
ನಮಗೆ ಈ ಭಾಗದಲ್ಲಿ ಕಾಡು ಪ್ರಾಣಿಗಳು ಹೆಚ್ಚು ಹಾವಳಿ ಇರುವುದರಿಂದ ನಾವುಗಳು ಬೆಳೆದ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಐದು ಕೀಲೋ ಮೀಟರ್ ದೂರ ರೈಲು ಕಂಬಿಗಳು ಅಳವಡಿಸಿಲ್ಲ ಅಳವಡಿಸಬೇಕು.ಈ ಅರಣ್ಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮಗೆ ನಿಮ್ಮ ಪರಿಹಾರ ಬೇಡ ರೈತನ ಜೀವವನ್ನು ತಂದು ಕೊಡಿ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಮಾತನಾಡಿ, ನಿಮಗೆ ನಮ್ಮ ಇಲಾಖೆಯಿಂದ 20 ಲಕ್ಷ ಹಾಗೂ ಮಾಸಿಕ ಐದು ವರ್ಷಗಳವರೆಗೆ ನೀಡಲಾಗುವುದು ಹಾಗೂ ಕುಟುಂಬದವರಿಗೆ ಕೆಲಸ ನೀಡುತ್ತೇವೆ.ಈ ಭಾಗದ ರೈಲು ಕಂಬಿಗಳು ಶೀಘ್ರದಲ್ಲೇ ಅಳವಡಿಸಲು ಮುಂದಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನಕುಮಾರಿ, ಡಿಸಿಎಫ್ ಪ್ರಭಾಕರನ್, ಮೈಸೂರು ಡಿಸಿಎಫ್ ಪರಮೇಶ್, ಎಸಿಎಫ್ ಡಿ.ಪರಮೇಶ್, ಪೋಲೀಸ್ ಇಲಾಖೆ ಅಧಿಕಾರಿಗಳು ಪ್ರಸನ್ನ ಕುಮಾರ್, ಗಂಗಾಧರ್, ಕಿರಣ್, ಚಂದ್ರಹಾಸ ಸ್ಥಳದಲ್ಲಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


