ಕೊರಟಗೆರೆ : ಭ್ರಷ್ಟಾಚಾರವು ಕೇವಲ ಹಣದ ವ್ಯವಹಾರವಲ್ಲ, ಅದು ನೈತಿಕ ಮೌಲ್ಯಗಳ ಕುಸಿತವಾಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾರದರ್ಶಕತೆ, ನೈತಿಕತೆ ಮತ್ತು ಹೊಣೆಗಾರಿಕೆಯಿಂದ ನಡೆದುಕೊಂಡಾಗ ಮಾತ್ರ ಶುದ್ಧ ಆಡಳಿತ ಸಾಧ್ಯ ಎಂದು ತುಮಕೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಶಿವರುದ್ರಪ್ಪ ಮೇಟಿ ಹೇಳಿದರು.
ಭ್ರಷ್ಟಾಚಾರವೆಂಬ ಸಾಮಾಜಿಕ ವ್ಯಾಧಿಗೆ ಅಂತ್ಯಗೊಳಿಸುವ ದೃಢಸಂಕಲ್ಪದೊಂದಿಗೆ “ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ–2025” ಕಾರ್ಯಕ್ರಮವನ್ನು ಕರ್ನಾಟಕ ಲೋಕಾಯುಕ್ತ, ತುಮಕೂರು ಘಟಕದ ವತಿಯಿಂದ ಕೊರಟಗೆರೆ ತಾ.ಪಂ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರ ಸಹಕಾರವಿಲ್ಲದೆ ಭ್ರಷ್ಟಾಚಾರ ವಿರೋಧಿ ಚಳವಳಿ ಯಶಸ್ವಿಯಾಗಲಾರದು, ಈ ಪಿಡುಗಿಗೆ ಯಾರೊಬ್ಬರೂ ಒಳಗಾಗಬಾರದು ವೃತ್ತಿಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ತಹಶೀಲ್ದಾರ್ ಮಂಜುನಾಥ ಕೆ. ಮಾತನಾಡಿ, ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುವ ಹೋರಾಟ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಕಾನೂನಿನಲ್ಲಿ ಭ್ರಷ್ಟಾಚಾರ ವಿರುದ್ಧ ಕಠಿಣ ಶಿಕ್ಷೆಗಳು ಇದ್ದರೂ, ಜನರು ತಮ್ಮ ಹಕ್ಕುಗಳನ್ನು ಅರಿತು ಧೈರ್ಯವಾಗಿ ದೂರು ನೀಡಬೇಕಾಗಿದೆ, ಪಾರದರ್ಶಕ ಆಡಳಿತಕ್ಕೆ ತಂತ್ರಜ್ಞಾನ ಬಳಕೆಯು ಸಹಾಯಕವಾಗುತ್ತದೆ ಇದನ್ನು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಬಳಕೆ ಮಾಡಬೇಕು ಎಂದರು.
ತಾ.ಪಂ ಇಓ ಅಪೂರ್ವ ಸಿ ಮಾತನಾಡಿ, ಸರ್ಕಾರಿ ಸೇವೆ ಒಂದು ಕರ್ತವ್ಯ ಮತ್ತು ಸೇವಾ ಧರ್ಮ. ಅಧಿಕಾರಿಗಳು ಜನರ ವಿಶ್ವಾಸ ಗೆಲ್ಲಬೇಕಾದರೆ ಭ್ರಷ್ಟಾಚಾರದಿಂದ ದೂರವಿರುವ ನೈತಿಕ ಬದ್ಧತೆ ಅಗತ್ಯ, ಎಂದು ತಿಳಿಸಿದರು.
ಈ ಕಾರ್ಯಕ್ರಮದ ಪ್ರಮುಖ ಅಂಗವಾಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ, ನೌಕರರಿಗೆ ಮತ್ತು ಸಾರ್ವಜನಿಕರಿಗೆ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿಯ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಗುರುಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


