ರಾಜ್ಯದಲ್ಲಿ JN.1 ವೈರಸ್ ಭೀತಿ ಹಿನ್ನೆಲೆ ಬೆಂಗಳೂರು ನಗರದ ಶಾಲೆಗಳ ಮಕ್ಕಳು ಹಾಗೂ ಪೋಷಕರಿಗೆ ಆತಂಕ ಶುರುವಾಗಿದೆ. ರಾಜಧಾನಿಯಲ್ಲಿ ಕೋವಿಡ್ ಗೆ ಈಗಾಗಲೇ ಮೂವರು ಸೋಂಕಿತರು ಸಾವನ್ನಪ್ಪಿದೆ. ಹೀಗಾಗಿ ಮಕ್ಕಳಿಗೆ ಕೊರೋನಾ ವಕ್ಕರಿಸಿದಂತೆ ನೋಡಿಕೊಳ್ಳಲು ಖಾಸಗಿ ಶಾಲೆಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ.
ಈ ಹಿಂದಿನ ಕೊರೊನಾ ಅಲೆಯಲ್ಲಿ ಆರ್ಥಿಕ ಹೊಡೆತ ತಿಂದಿದ್ದ ಖಾಸಗಿ ಶಾಲೆಗಳಿಗೆ ಇದೀಗ ಮತ್ತೊಮ್ಮೆ ಭೀತಿ ಎದುರಾಗಿದೆ. ಅಲ್ಲದೆ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಚಿಂತನೆ ನಡೆಸಲಾಗುತ್ತಿದ್ದು, ಕೆಲವು ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪೋಷಕರಿಗೆ ಶಾಲೆ ಆಡಳಿತ ಮಂಡಳಿಗಳು ಸಂದೇಶ ರವಾನಿಸಿದ್ದಾರೆ.
JN.1 ವೈರಸ್ ರಾಕೆಟ್ ವೇಗದಲ್ಲಿ ಹರಡುವ ಹಿನ್ನೆಲೆ ಮಕ್ಕಳ ಬಗ್ಗೆ ಜಾಗೃತಿಗೆ ಕೆಲ ಖಾಸಗಿ ಶಾಲೆಗಳು ನಿರ್ಧಾರ ಮಾಡಿದ್ದು, ಮಕ್ಕಳಿಗೆ ಮಾಸ್ಕ್ ಹಾಕಿ ಕಳುಹಿಸಿ, ತಮ್ಮ ಮಕ್ಕಳಿಗೆ ಜ್ವರ, ಕೆಮ್ಮು, ಶೀತ ಇದ್ದರೆ ಶಾಲೆಗೆ ಕಳುಹಿಸದಂತೆ ಸೂಚನೆ ನೀಡಿದ್ದಾರೆ.
ಖಾಸಗಿ ಶಾಲಾ ಒಕ್ಕೂಟ ಹೈ ಅಲರ್ಟ್:
ರೂಪಾಂತರಿಯ ಉಪಟಳ ಹಿನ್ನೆಲೆ ಕ್ಯಾಮ್ಸ್ ಶಾಲಾ ಒಕ್ಕೂಟ ಹೈ ಅಲರ್ಟ್ ಆಗಿದ್ದು, ತನ್ನ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಮಾರ್ಗಸೂಚಿ ಪಾಲನೆ ಮಾಡಲು ಸೂಚನೆ ನೀಡಿದೆ. ಹಾಗಾದರೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೊಟ್ಟ ಸೂಚನೆ ಏನು? ಇಲ್ಲಿದೆ ಮಾಹಿತಿ.
JN.1 ಬಗ್ಗೆ ಕೆಲ ಸುಳ್ಳು ಸುದ್ದಿಯನ್ನು ನಂಬಬಾರದು, ಮಕ್ಕಳಲ್ಲಿ ಗಾಬರಿ ಹುಟ್ಟಿಸಬಾರದು.
ಶಾಲೆಗೆ ಬರುವ ಮಕ್ಕಳ ದೇಹದ ಉಷ್ಣಾಂಶ ಪರಿಷೀಲನೆ ಮಾಡಬೇಕು.
ಮಕ್ಕಳು ಶಾಲೆಗೆ ಎಂಟ್ರಿ ಆಗುವಾಗ ಸ್ಯಾನಿಟೈಸರ್ ಹಾಕಬೇಕು.
ಶಾಲಾ ಆವರಣ ಸ್ಯಾನಿಟೈಸ್ ಮಾಡ್ತಾ ಇರಬೇಕು, ಸ್ವಚ್ಛವಾಗಿ ಇಡಬೇಕು.
ಆರೋಗ್ಯ ಸಮಸ್ಯೆ ಇರುವ ಮಕ್ಕಳು ಮಾಸ್ಕ್ ಧರಿಸುವಂತೆ ಸೂಚನೆ.
ಶಾಲೆಗೆ ಬಂದ ಮೇಲೆ ಮಕ್ಕಳು ಹುಷಾರು ತಪ್ಪಿದರೆ ತಕ್ಷಣ ಅಂತಹ ಮಕ್ಕಳ ಐಸೋಲೇಟ್ ಮಾಡಬೇಕು, ಪೋಷಕರ ಗಮನಕ್ಕೆ ತರಬೇಕು.
ಅನಾರೋಗ್ಯದ ಮಕ್ಕಳಟೆಸ್ಟ್ ಅಥವಾ ಕ್ಲಾಸ್ ಮಿಸ್ ಆಗುತ್ತೆ ಅಂತ ಪೋಷಕರು ಮಕ್ಕಳ ಶಾಲೆಗೆ ಕಳುಹಿಸದ ಹಾಗೇ ಎಚ್ಚರ ವಹಿಸಬೇಕು.
ರಜಾ ದಿನಗಳಲ್ಲಿ ಮಕ್ಕಳನ್ನು ಜನಸಂದಣಿ ಜಾಗಕ್ಕೆ ಕರೆದುಕೊಂಡು ಹೋಗುವುದನ್ನ ಪೋಷಕರು ನಿಲ್ಲಿಸಬೇಕು.
ಶಾಲಾ ಪ್ರವಾಸ ಕರೆದುಕೊಂಡು ಹೋದರೆ ಅಗತ್ಯ ಮುಂಜಾಗ್ರತೆ ವಹಿಸಲೇಬೇಕು, ಆಕ್ಸಿಜನ್ ಕಿಟ್ ಸಮೇತ ಹೋಗಬೇಕು. ಬೇರೆ ರಾಜ್ಯ ಹಾಗೂ ದೇಶಕ್ಕೆ ಹೋಗಿ ಬಂದ ಮಕ್ಕಳ ಮೇಲೆ ಹದ್ದಿನ ಕಣ್ಣಿಡಬೇಕು.
ವರದಿ: ಆಂಟೋನಿ ಬೇಗೂರು


