ಸಾರಿಗೆ ಹಾಗೂ ಮುಜರಾಯಿ ಸಚಿವರು ಮತ್ತು ಅಧ್ಯಕ್ಷರು, ಕರಾರಸಾ ನಿಗಮ ರವರು ನಿಗಮದ ಕೇಂದ್ರ ಕಛೇರಿಯಲ್ಲಿ ನಿಗಮವು ತನ್ನ ಸಿಬ್ಬಂದಿ ಹಾಗೂ ಅವರ ಅವಲಂಬಿತರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಯೋಜನೆಯಡಿ ರೂ. 1 ಕೋಟಿ ಅಪಘಾತ ಪರಿಹಾರ ವಿಮೆಯ ಚೆಕ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕೆ. ಎಸ್. ಆರ್. ಟಿ. ಸಿ ಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗೆ ರೂ. 1 ಕೋಟಿ ಮೊತ್ತದ ಅಪಘಾತ ವಿಮೆಯನ್ನು ( On duty & Of Duty ಅಪಘಾತ) ಜಾರಿಗೊಳಿಸಿದೆ. ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ ರೂ 50 ಲಕ್ಷಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ವಾರ್ಷಿಕ ರೂ. 885/- ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ ರೂ. 50 ಲಕ್ಷಗಳ ವಿಮೆಯು ಒಳಗೊಂಡಿರುತ್ತದೆ.
ಈ ಯೋಜನೆಯಡಿಯಲ್ಲಿ ಸಿಬ್ಬಂದಿಗಳು ಕರ್ತವ್ಯದ ಮೇಲಿದ್ದಾಗ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ ಅಪಘಾತಗಳಿಗೂ ಸಹ ಈ ವಿಮಾ ಸೌಲಭ್ಯ ಅನ್ವಯಿಸುತ್ತದೆ. ಈ ಯೋಜನೆಯ ಜಾರಿಯ ನಂತರದಲ್ಲಿ ಕೆ. ಎಸ್. ಆರ್. ಟಿ. ಸಿ. ಯ ಚಾಲನಾ ಸಿಬ್ಬಂದಿಗಳಾದ ಶಜಿ. ವಿ. ಚಲಪತಿ, 41 ವರ್ಷ, ಚಾಲಕ-ಕಂ-ನಿರ್ವಾಹಕರು, ಬಿಲ್ಲೆ ಸಂಖ್ಯೆ 7275, ಘಟಕ-6, ಬೆಂಗಳೂರು ಕೇಂದ್ರೀಯ ವಿಭಾಗರವರು ನಿಗಮದಲ್ಲಿ 11 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ.
ದಿನಾಂಕ ಜನವರಿ 29 2023 ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಮೃತಪಟ್ಟಿರುತ್ತಾರೆ. ಇವರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ವಿಮಾ ಪರಿಹಾರ ರೂ. 1 ಕೋಟಿ ಹೊರತುಪಡಿಸಿ, ನಿಗಮದ ವತಿಯಿಂದ ರೂ. 17. 21 ಲಕ್ಷ ಪರಿಹಾರಕ್ಕೆ ಅರ್ಹರಿದ್ದು, ಈ ಪೈಕಿ ರೂ. 12. 71 ಲಕ್ಷ ಪರಿಹಾರ ಈಗಾಗಲೇ ವಿತರಿಸಲಾಗಿದೆ. ಬಾಕಿ ಮೊತ್ತ ರೂ. 4. 50 ಲಕ್ಷವನ್ನು ಮೃತ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿ ಪಾವತಿಯಾಗಲಿದೆ.
ಪಿ. ಎನ್. ನಾಗರಾಜು, 52 ವರ್ಷ, ಚಾಲಕ-ಕಂ-ನಿರ್ವಾಹಕರು, ಬಿಲ್ಲೆ ಸಂಖ್ಯೆ. 1173, ಘಟಕ-2, ಹಾಸನ ವಿಭಾಗ ರವರು ನಿಗಮದಲ್ಲಿ 17 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ.
ಫೆಬ್ರವರಿ 1, 2023 ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿಮಾಡಿದ ಪರಿಣಾಮ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಇವರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ವಿಮಾ ಪರಿಹಾರ ರೂ. 1 ಕೋಟಿ ಹೊರತುಪಡಿಸಿ, ನಿಗಮದ ವತಿಯಿಂದ ರೂ. 21. 94 ಲಕ್ಷ ಪರಿಹಾರಕ್ಕೆ ಅರ್ಹರಿದ್ದು, ಈ ಪೈಕಿ ರೂ. 16. 19 ಲಕ್ಷ ಪರಿಹಾರ ಈಗಾಗಲೇ ವಿತರಿಸಲಾಗಿದೆ. ಬಾಕಿ ಮೊತ್ತ ರೂ. 5. 75 ಲಕ್ಷ ಮೃತರ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿಇಲಾಖೆಯಿಂದ ಶೀಘ್ರದಲ್ಲಿಯೇ ಪಾವತಿಯಾಗಲಿದೆ.
ಸಾರಿಗೆ ಹಾಗೂ ಮುಜರಾಯಿ ಸಚಿವರು ಮತ್ತು ಮಾನ್ಯ ಅಧ್ಯಕ್ಷರು, ಕರಾರಸಾ ನಿಗಮ ರವರು ಈ ಎರಡು ಚಾಲನಾ ಸಿಬ್ಬಂದಿಗಳ ಕುಟುಂಬ ವರ್ಗದವರಿಗೆ ಅಪಘಾತ ಪರಿಹಾರ ವಿಮಾದ ತಲಾ ರೂ. 1 ಕೋಟಿಗಳ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಸ್ ಬಿ. ಐ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಹೆಚ್. ವಿ. ಅನಂತ ಸುಬ್ಬರಾವ್, ಬಿ. ಜಯದೇವರಾಜೇ ಅರಸು, ಜಿ. ಎಸ್. ಮಹದೇವಯ್ಯ, ಹೆಚ್. ಡಿ. ರೇವಪ್ಪ, ಎಸ್. ನಾಗರಾಜ, ವೆಂಕಟರಮಣಪ್ಪ ಮತ್ತು ಇತರರು ಹಾಗೂ ನಿಗಮದ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


