ತುಮಕೂರು: ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ವಿದೇಶಿ ಉನ್ನತ ವ್ಯಾಸಂಗಕ್ಕಾಗಿ ನೇರ ಸಾಲದ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಜನಾಂಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ೧೮ ರಿಂದ ೩೮ ವರ್ಷದೊಳಗಿನವರಾಗಿದ್ದು, ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಹಿಂದಿನ ವರ್ಷದಲ್ಲಿ ಕನಿಷ್ಟ ಶೇ.೬೦ ಅಂಕ ಹಾಗೂ ವಿದೇಶಿ ವಿಶ್ವ ವಿದ್ಯಾಲಯದಿಂದ ಆಫರ್ ಲೆಟರ್ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ೮ ಲಕ್ಷ ರೂ. ಮೀರಿರಬಾರದು. ಈ ಸಾಲ ಸೌಲಭ್ಯ ಪಡೆಯುವ ಅರ್ಜಿದಾರರು ಸರ್ಕಾರವು ಅಂಗೀಕರಿಸಿದ ಅಲ್ಪಸಂಖ್ಯಾತ ವರ್ಗಗಳ ಪ್ರವರ್ಗ-೧, ೨ಬಿ, ಮತ್ತು ೩ಬಿ ಗುಂಪಿಗೆ ಸೇರಿದವರಾಗಿರಬೇಕು. ಈ ಹಿಂದೆ ನಿಗಮದ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದವರಿಗೆ ಮತ್ತೊಮ್ಮೆ ಸಾಲ ಸೌಲಭ್ಯ ಪಡೆಯಲು ಅರ್ಹತೆ ಇರುವುದಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆಸ್ತಿ(ಕಟ್ಟಡ/ಜಮೀನು)ಯನ್ನು ನಿಗಮದ ಹೆಸರಿಗೆ ಅಡಮಾನ ಇಟ್ಟರೆ ಮಾತ್ರ ಸಾಲ ಸೌಲಭ್ಯ ಕಲ್ಪಿಸಲಾಗುವುದು(ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು).
ಅಭ್ಯರ್ಥಿಗಳು ಜಾಲತಾಣ www.kmdconline.karnataka.gov.in ಮೂಲಕ ಆಗಸ್ಟ್ ೩೧ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಜಾದ್ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು ಇವರ ಕಚೇರಿ ಅಥವಾ ದೂ.ವಾ.ಸಂ.೦೮೧೬-೨೨೮೧೦೩ನ್ನು ಸಂಪರ್ಕಿಸಬೇಕೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296