ತುಮಕೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಿದೆ.
ಸ್ವಯಂ ಸೇವಾ ಸಂಸ್ಥೆಗಳ ಮೂಲಕ 2025–26ನೇ ಸಾಲಿನಲ್ಲಿ ನಡೆಯುವ ಸಮೂಹ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50,000 ರೂ. ಮತ್ತು ಸದರಿ ಸಮೂಹ ವಿವಾಹವನ್ನು ಆಯೋಜಿಸುವ ಆಯೋಜಕರಿಗೆ 5,000 (ಪ್ರತಿ ಜೋಡಿಗೆ) ರೂ.ಗಳ ಸಹಾಯಧನ ನೀಡಲಾಗುವುದು.
ಸರಳ ಸಮೂಹ ವಿವಾಹಕ್ಕೆ ಜಿಲ್ಲಾ ನೋಂದಾಯಿತ ವಕ್ಫ್ ಬೋರ್ಡ್ ಕಚೇರಿಯಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್, ದೇವಸ್ಥಾನದ ಟ್ರಸ್ಟ್, ಸಂಘ, ಸೊಸೈಟಿ, ವಕ್ಫ್ ಸಂಸ್ಥೆ ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಧು–ವರರು ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಸಮುದಾಯ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ)ಕ್ಕೆ ಸೇರಿದವರಾಗಿರಬೇಕು. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ 5 ಜೋಡಿಗಳು ಭಾಗವಹಿಸಬೇಕು. ಸಾಮೂಹಿಕ ವಿವಾಹಕ್ಕೆ ವಧುವಿಗೆ 18ರಿಂದ 42 ವರ್ಷ ಹಾಗೂ ವರನಿಗೆ 21 ರಿಂದ 45 ವರ್ಷ ವಯಸ್ಸಾಗಿರಬೇಕು. ವಧು–ವರರ ವಾರ್ಷಿಕ ಆದಾಯ 5 ಲಕ್ಷ ರೂ. ಮೀರಿರಬಾರದು. ಈ ಸೌಲಭ್ಯ ಒಮ್ಮೆ ಮಾತ್ರ ಪಡೆಯಬಹುದಾಗಿದ್ದು, ವರನಿಗೆ ಈಗಾಗಲೇ ಜೀವಂತ ಪತ್ನಿಯಿದ್ದಲ್ಲಿ ಅಥವಾ ವಧುವಿಗೆ ಜೀವಂತ ಪತಿಯಿದ್ದಲ್ಲಿ ಈ ಯೋಜನೆ ಅನ್ವಯಿಸುವುದಿಲ್ಲ. ವಧು–ವರರು ಕನಿಷ್ಟ 7 ದಿನ ಮುಂಚಿತವಾಗಿ ವಾಸ್ತವ್ಯ ಇರುವ ಜಿಲ್ಲೆಯಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು. ಅರ್ಹ ವಧು ವರರಿಗೆ ಮಂಜೂರಾದ ಪ್ರೋತ್ಸಾಹ ಧನವನ್ನು ವಧು– ವರರ ಹೆಸರಿನಲ್ಲಿರುವ ಜಂಟಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಸರಳ ಸಾಮೂಹಿಕ ವಿವಾಹ ಏರ್ಪಡಿಸುವ ಆಯೋಜಕರು 7 ದಿನ ಮುಂಚಿತವಾಗಿ ಕಾರ್ಯಕ್ರಮ ಆಯೋಜನೆ ಬಗ್ಗೆ ಅರ್ಜಿ ಹಾಗೂ ವಿವಾಹ ನಡೆದ ದಿನಾಂಕದಿಂದ 3 ದಿನದೊಳಗಾಗಿ ಅಗತ್ಯ ದಾಖಲೆ ಸಲ್ಲಿಸಬೇಕು. ಇದರ ಜೊತೆಗೆ ಪ್ರೋತ್ಸಾಹಧನ ಪಡೆಯಲು ಮದುವೆ ದಿನಾಂಕದಿಂದ 3 ತಿಂಗಳೊಳಗಾಗಿ ನಿಗದಿತ ನಮೂನೆಯಲ್ಲಿ ಮದುವೆ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 0816–2273724ನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC