ತುಮಕೂರು: ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸುಮಾರು 1,500 ಉದ್ಯೋಗಾರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಶ್ವವಿದ್ಯಾನಿಲಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ತುಮಕೂರು ವಿಶ್ವವಿದ್ಯಾನಿಲಯದ ಡಾ.ಪಿ.ಸದಾನಂದಮಯ್ಯ ಬ್ಲಾಕ್ ನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ–2025ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಜಿಲ್ಲೆಯ ಸುಮಾರು 1,500 ಉದ್ಯೋಗಾಕಾಂಕ್ಷಿಗಳಿಗೆ ಜನವರಿ 26ರಂದು ಜಿಲ್ಲಾ ಉಸ್ತುವಾರಿ ಸಚಿವರು ನೇಮಕಾತಿ ಆದೇಶ ನೀಡಲಿದ್ದಾರೆ ಎಂದು ತಿಳಿಸಿದರು.
ಇತ್ತೀಚೆಗಷ್ಟೆ ಕಾರ್ಯ ನಿಮಿತ್ತ ಮಧುಗಿರಿ ತಾಲ್ಲೂಕಿನ ಗ್ರಾಮವೊಂದಕ್ಕೆ ಭೇಟಿ ನೀಡಿದಾಗ ಯುವಕರ ತಂಡವೊಂದು ಮೊಬೈಲ್ ವೀಕ್ಷಿಸುತ್ತಾ, ಕಾಲ ಕಳೆಯುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಯುವಕರೆಲ್ಲರೂ ಪದವಿ ಹೊಂದಿರುವ ವಿಚಾರ ತಿಳಿದು ಬಂದಿತು. ಪದವೀಧರರಾಗಿದ್ದರೂ ನಿರುದ್ಯೋಗಿಗಳಾಗಿರುವುದನ್ನು ಮನಗಂಡು ಶಿಕ್ಷಣ ಪೂರ್ಣಗೊಳಿಸಿರುವ ಯುವಕರಿಗಾಗಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆತಾಗ ಮಾತ್ರ ಉದ್ಯೋಗ ಮೇಳ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸೇರಿ ಮತ್ತಿತರ ಇಲಾಖೆ, ಸಂಘ ಸಂಸ್ಥೆಗಳು ಮೇಳದ ಆಯೋಜನೆಗೆ ಶ್ರಮಿಸಿದ್ದು, ನಿರೀಕ್ಷೆಗೂ ಮೀರಿ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಓದನ್ನು ಪೂರ್ಣಗೊಳಿಸಿದವರು ಸರ್ಕಾರಿ ಉದ್ಯೋಗವನ್ನೇ ಕಾಯದೆ ಖಾಸಗಿ ಉದ್ಯೋಗ ಪಡೆದು ಸ್ವಂತ ಕಾಲಿನ ಮೇಲೆ ನಿಲ್ಲಬೇಕು. ಓದಿದ ಮಕ್ಕಳು ಹೆತ್ತವರಿಗೆ ಭಾರವಾಗಬಾರದು. ಇಂತಹ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅವಕಾಶವನ್ನು ಗಿಟ್ಟಿಸಿಕೊಳ್ಳಬೇಕು. ಕಡಿಮೆ ವೇತನವೆಂದು ಹಿಂದೆ ಸರಿಯದೆ ದೊರೆತ ಮೊದಲ ಅವಕಾಶವನ್ನು ಬಳಸಿಕೊಳ್ಳುವುದರಲ್ಲಿ ಜಾಣತನವಿದೆ ಎಂದು ತಿಳಿಸಿದರು.
ಮೇಳದಲ್ಲಿ ಸುಮಾರು 92 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, ಹುದ್ದೆಗೆ ಆಯ್ಕೆಯಾದವರು ಮಧ್ಯದಲ್ಲಿಯೇ ಬಿಡದೆ ಕೌಶಲ್ಯದಿಂದ ಕೆಲಸ ಮಾಡಬೇಕು. ಹುದ್ದೆ ಸಣ್ಣದಿರಲಿ, ದೊಡ್ಡದಿರಲಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದಾಗ ಗೆಲವು ಖಂಡಿತ ಎಂದು ಮಾರ್ಮಿಕವಾಗಿ ನುಡಿದರು.
ಗ್ರಾಮೀಣರಿಗೂ ಉದ್ಯೋಗ ದೊರೆಯಬೇಕೆಂಬ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿಯೂ ಉದ್ಯೋಗ ಮೇಳ ಆಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಲು ಕಾರಣವಾಗಿದೆ ಎಂದರಲ್ಲದೆ, ದೇಶದ ಅಭಿವೃದ್ಧಿಗೆ ಯುವ ಜನತೆ ಸೋಮಾರಿಗಳಾಗದೆ ಯಾವುದಾದರೂ ಉತ್ತಮ ಉದ್ಯೋಗ ಹೊಂದುವುದು ಸೂಕ್ತವೆಂದು ಕಿವಿಮಾತು ಹೇಳಿದರು.
ವಿಶ್ವವಿದ್ಯಾನಿಲಯದ ಕುಲಸಚಿವ ನಾಹಿದಾ ಜಮ್ ಜಮ್ ಮಾತನಾಡಿ, ಜಿಲ್ಲಾಡಳಿತದಿಂದ ಯುವ ಉದ್ಯೋಗಾರ್ಥಿಗಳಿಗಾಗಿ ಮೇಳ ಆಯೋಜಿಸಿರುವುದು ಅಭಿನಂದನಾರ್ಹವಾಗಿದೆ. ಎಷ್ಟೋ ಕಂಪನಿಗಳಲ್ಲಿ ಕೌಶಲ್ಯದ ಕೊರತೆಯಿಂದ ಹುದ್ದೆಗಳು ಖಾಲಿಯಿವೆ. ತರಗತಿಯಲ್ಲಿ ಉತ್ತಮ ಅಂಕಗಳಿಸುವುದಷ್ಟೆ ಉದ್ಯೋಗ ಪಡೆಯಲು ಕಾರಣವಾಗುವುದಿಲ್ಲ. ಈ ನಿಟ್ಟಿನಲ್ಲಿ ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕೌಶಲ್ಯ ತರಬೇತಿಯನ್ನೂ ನೀಡಬೇಕು. ಮೇಳದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಉದ್ಯೋಗದಾತರಿಗೆ ಮನವಿ ಮಾಡಿದರು.
ವಿಶ್ವವಿದ್ಯಾನಿಲಯದ ಉದ್ಯೋಗ ನಿಯೋಜನಾಧಿಕಾರಿ ಪ್ರೊ.ಪರಶುರಾಮ ಕೆ.ಜಿ. ಮಾತನಾಡಿ, ಮೇಳದಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಉದ್ಯೋಗಾರ್ಥಿಗಳು ಪಾಲ್ಗೊಂಡಿದ್ದಾರೆ. ಈವರೆಗೆ ಸುಮಾರು 5,000 ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಲು ನೋಂದಣಿಯಾಗಿದ್ದಾರೆ. ಕುಲಸಚಿವರು ಸೂಚಿಸಿದಂತೆ ವಿಶ್ವವಿದ್ಯಾನಿಲಯಗಳಲ್ಲಿ ಕಲಿಕೆಯೊಂದಿಗೆ ಕೌಶಲ್ಯ ತರಬೇತಿ ನೀಡುವ ಬಗ್ಗೆ ಚಿಂತನೆ ಮಾಡಲಾಗುವುದು. ವರ್ಷಕ್ಕೆರಡು ಬಾರಿಯಾದರೂ ಇಂತಹ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕು. ಈ ಉದ್ಯೋಗ ಮೇಳದಲ್ಲಿ 3,500 ಉದ್ಯೋಗಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ: ರಮೇಶ್ ಬಿ. ಮಾತನಾಡಿ, ಈ ಉದ್ಯೋಗ ಮೇಳವು ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳ ನಡುವೆ ಸೇತುವೆಯಾಗಿದ್ದು, ನಿರುದ್ಯೋಗಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು ಮಾತನಾಡಿ, ವಿಪ್ರೋ, ಮೆಡ್ ಪ್ಲಸ್, ಮುತ್ಹೂಟ್ ಫೈನಾನ್ಸ್ ಲಿಮಿಟೆಡ್, ಹಿಟಾಚಿ, ಟಿವಿಎಸ್ ಎಲೆಕ್ಟ್ರಾನಿಕ್ಸ್, ಈಚರ್, ಶ್ರೀರಾಮ್ ಫೈನಾನ್ಸ್, ಹೆಚ್‌ಡಿಎಫ್‌ಸಿ ಲೈಫ್, ವಾಹಿನಿ ಇರಿಗೇಷನ್, ಮಣ್ಣಪುರಂ ಫೈನಾನ್ಸ್, ಜಸ್ಟ್ ಡಯಲ್, ಫ್ಲಿಫ್ ಕಾರ್ಟ್, ಎಲ್ ಎನ್ ಟಿ ಫೈನಾನ್ಸ್ ನಂತಹ ಪ್ರತಿಷ್ಠಿತ ಕಂಪನಿ ಸೇರಿ 90ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿವೆ. ಜಿಲ್ಲೆಯ 16 ಕೈಗಾರಿಕೆಗಳು ತಮ್ಮಲ್ಲಿ ಖಾಲಿಯಿರುವ 125ಕ್ಕೂ ಹೆಚ್ಚು ಹುದ್ದೆಗಳಿಗೆ ಸಂದರ್ಶನದ ಮೂಲಕ ಉದ್ಯೋಗಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. ಮೇಳದಲ್ಲಿ ಪದವಿ, ಸ್ನಾತಕ ಪದವಿ, ಇಂಜಿನಿಯರಿಂಗ್, ಐಟಿಐ, ಡಿಪ್ಲೋಮಾ, 10ನೇ ತರಗತಿ, ಪಿಯುಸಿ ತೇರ್ಗಡೆ, 10ನೇ ತರಗತಿ ಅನುತ್ತೀರ್ಣರಾದವರಿಗೂ ಉದ್ಯೋಗ ನೀಡಲು ಕಂಪನಿಗಳು ಮುಂದೆ ಬಂದಿದ್ದು, ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಕಿಶೋರ್ ಕುಮಾರ್ ಮಾತನಾಡಿ, ಶಿಕ್ಷಣ ಮುಗಿಸಿದವರು ಪ್ರತಿಯೊಂದು ಕೈಗಾರಿಕೆ/ಕಂಪನಿಗಳಿಗೆ ಭೇಟಿ ನೀಡಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಫೀಲ್ಡ್ ಆಫೀಸರ್, ಜೂನಿಯರ್ ಎಕ್ಸಿಕ್ಯೂಟಿವ್, ಸೇಲ್ಸ್ ಎಕ್ಸಿಕ್ಯೂಟಿವ್, ಹೆಲ್ಪರ್, ಟೆಕ್ನಿಷಿಯನ್, ಆಪರೇಟರ್ಸ್, ಮಾರ್ಕೇಟಿಂಗ್ ಅಂಡ್ ಅಡ್ಮಿನ್, ಪ್ರಾಜೆಕ್ಟ್ ಕೋ–ಆರ್ಡಿನೇಟರ್, ಸಿವಿಲ್ ಇಂಜಿನಿಯರ್, ಹೋಟೆಲ್ ಮ್ಯಾನೇಜ್ ಮೆಂಟ್, ಹೆಚ್.ಆರ್., ಕ್ಯಾಲಿಟಿ ಇನ್ಸ್ಪೆಕ್ಟರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ವಿಕಲಚೇತನರಿಗೂ ಉದ್ಯೋಗಾವಕಾಶ ನೀಡಲು ಬೆಂಗಳೂರಿನ ಸಮರ್ಥನಂ ಟ್ರಸ್ಟ್, ವಾಯ್ಸ್ ಆಫ್ ನೀಡಿ ಫೌಂಡೇಷನ್ ಹಾಗೂ ಯೂತ್ ಜಾಬ್ಸ್ ಫೌಂಡೇಷನ್ ಕಂಪನಿಗಳು ಮೇಳದಲ್ಲಿ ಪಾಲ್ಗೊಂಡಿದ್ದವು ಎಂದು ತಿಳಿಸಿದರು.
ಎಸ್ ಬಿಐ ಆರ್ ಸೆಟಿ ಸಂಸ್ಥೆಯ ನಿರ್ದೇಶಕ ಕೆ.ಎನ್. ವಾದಿರಾಜ್ ಮಾತನಾಡಿ, ಆರ್ ಸೆಟಿ ಸಂಸ್ಥೆಯಿಂದ ಗ್ರಾಮೀಣ ಪ್ರದೇಶದ 45 ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಈ ತರಬೇತಿ ಸಹಕಾರಿಯಾಗಲಿದೆ. ಮನೆಯಲ್ಲೇ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳುವ ಕುರಿತು ತರಬೇತಿಯಲ್ಲಿ ಹೇಳಿ ಕೊಡಲಾಗುವುದು. ಈ ತರಬೇತಿ ಸೌಲಭ್ಯವನ್ನು ನಿರುದ್ಯೋಗಿಗಳು ಪಡೆಯಬೇಕು ಎಂದರಲ್ಲದೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಜಿಲ್ಲೆಯ ನಿರುದ್ಯೋಗಿಗಳು ತೊಡಗಿಕೊಳ್ಳಲು ಎಸ್.ಬಿ.ಐ.ನಿಂದ ಬ್ಯಾಂಕ್ ತರಬೇತಿ ನೀಡಲು ಸಿದ್ಧವಿದೆ. ಬ್ಯಾಂಕಿಂಗ್ ತರಬೇತಿಯನ್ನು ಆಯೋಜಿಸಲು ವಿಶ್ವವಿದ್ಯಾನಿಲಯ ಮುಂದೆ ಬರಬೇಕು. ಬ್ಯಾಂಕುಗಳಲ್ಲಿ ರಾಜ್ಯದ ಪದವೀಧರರ ಸಂಖ್ಯೆ ಕಡಿಮೆ ಇರುವುದರಿಂದ ಈ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆಂಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮೇಳದಲ್ಲಿ ಆಯ್ಕೆಯಾದವರಿಗೆ 6 ತಿಂಗಳ ಕೌಶಲ್ಯ ತರಬೇತಿ ನೀಡಿದ ನಂತರ ಉದ್ಯೋಗಕ್ಕೆ ನೇಮಕಾತಿ ಮಾಡಲಾಗುವುದು. ತರಬೇತಿ ಅವಧಿಯಲ್ಲಿ ಶಿಷ್ಯವೇತನ ನೀಡಲಾಗುವುದು. ಶಿಷ್ಯವೇತನ ಶುಲ್ಕವನ್ನು ಕರ್ನಾಟಕದ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಭರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕಂಪನಿಗಳ ಉದ್ಯೋಗದಾತರು, ವಿವಿಧ ಅಧಿಕಾರಿಗಳು ಹಾಜರಿದ್ದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಅಂಜನ್ ಮೂರ್ತಿ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx