ಬೆಂಗಳೂರು: ನಗರದ ಆರ್ ಪಿಸಿ ಲೇಔಟ್ ನಲ್ಲಿರುವ ಹೊಟೇಲ್ ನಲ್ಲಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಯುವಕನು ಸ್ನೇಹಿತರೊಂದಿಗೆ ಬೆಟ್ ಕಟ್ಟಿ ಯುವತಿಯೊಬ್ಬಳನ್ನು ಅನುಚಿತವಾಗಿ ಸ್ಪರ್ಶಿಸಿ ಮುಜುಗರಕ್ಕೀಡು ಮಾಡಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಂದನ್ ವಿಕೃತ ಕಾಮಿ ಯುವಕನಾಗಿದ್ದು ಸಧ್ಯಕ್ಕೆ ಪೊಲೀಸರ ವಶದಲ್ಲಿದ್ದಾನೆ.
ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಚಂದನ್ ತನ್ನ ಸ್ನೇಹಿತರೊಂದಿಗೆ ಸಿನಿಮಾಗೆ ತೆರಳಿದ್ದ. ಬಳಿಕ ಅಲ್ಲಿನ ಹೋಟೆಲ್ ಒಂದರಲ್ಲಿ ಊಟಕ್ಕೆ ತೆರಳಿದ್ದಾಗ ಕೌಂಟರ್ ನಲ್ಲಿ ನಿಂತಿದ್ದ ಯುವತಿಯೊಬ್ಬಳನು ಸ್ಪರ್ಷಿಸುವುದಾಗಿ ಸ್ನೇಹಿತರೊಂದಿಗೆ ಪಂದ್ಯ ಕಟ್ಟಿದ್ದ. ಆದರೆ ಯುವತಿ ಈತನ ವಿಕೃತ ವರ್ತನೆಯಿಂದ ಕುಪಿತಳಾಗಿ ಪೊಲೀಸರಲ್ಲಿ ದೂರು ನೀಡಿದ್ದಳು.
ಹೋಟೆಲ್ ನಲ್ಲಿದ್ದ ಸಿಸಿಟಿವಿ ಕೆಮೆರಾ ದೃಶ್ಯದಲ್ಲಿ ಚಂದನ್ ವಿಕೃತಿ ಬಯಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು, ಬುಧವಾರ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಚಂದನ್ ತನ್ನ ಸ್ನೇಹಿತರೊಬ್ಬರು ಮಹಿಳೆಯನ್ನು ಮುಟ್ಟುವಂತೆ ಸವಾಲು ಹಾಕಿದ್ದ. ಅದನ್ನು ಒಪ್ಪಿಕೊಂಡು ಅಪರಾಧ ಎಸಗಿರುವುದಾಗಿ ಬಹಿರಂಗಪಡಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಂದನ್ನನ್ನು ಜೈಲಿಗೆ ಕಳಿಸಿದ್ದಾರೆ.


