ಬಸ್ ನಿಲ್ದಾಣ ಹಾಗೂ ಸಂಚರಿಸುವ ಬಸ್ ಗಳಲ್ಲಿ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಒಂದೇ ಕುಟುಂಬದ ಐವರನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕದರಿ ವೇಲು, ಕನ್ಯಾಕುಮಾರ್, ಮಹೇಶ್, ಸುಂದರ್ ರಾಜ್ ಹಾಗೂ ಸಲೀಂ ಬಂಧಿತರು. ಒಂದೇ ಪ್ರದೇಶದಲ್ಲಿ ವಾಸವಿದ್ದ ಆರೋಪಿಗಳು, ಗುಂಪು ಕಟ್ಟಿಕೊಂಡು ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದರು. ಇವರನ್ನು ಬಂಧಿಸಿ 70 ಸಾವಿರ ನಗದು ಹಾಗೂ 30 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರರೊಬ್ಬರು ತಮ್ಮ ಪತ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಕ್ಕಾಗಿ 1 ಲಕ್ಷ ನಗದು ಹಾಗೂ ಪತ್ನಿಯ ಚಿನ್ನದ ಮಾಂಗಲ್ಯವನ್ನು ಜೇಬಿನಲ್ಲಿ ಇಟ್ಟುಕೊಂಡು ಬಿಎಂಟಿಸಿ ಬಸ್ ನಲ್ಲಿ ಹೊರಟಿದ್ದರು. ಇದೇ ವೇಳೆ ಬಸ್ ಏರಿದ್ದ ಆರೋಪಿಗಳು, ದೂರುದಾರನ ಜೇಬಿನಲ್ಲಿದ್ದ ಹಣ ಕದ್ದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು’.
‘ಆರೋಪಿಗಳ ಪತ್ತೆಗಾಗಿ ಸುಮಾರು 150 ಸ್ಥಳಗಳಲ್ಲಿರುವ ಸಿ. ಸಿ. ಟಿ. ವಿ ಕ್ಯಾಮೆರಾ ಪರಿಶೀಲಿಸಲಾಗಿತ್ತು. ಕೆಲ ಸುಳಿವು ಆಧರಿಸಿ ವಶಕ್ಕೆ ಪಡೆದು ವಿಚಾರಿಸಿದಾಗ, ತನ್ನೊಪ್ಪಿಕೊಂಡರು’ ಎಂದು ತಿಳಿಸಿದರು.
ದೇವಸ್ಥಾನದ ಹುಂಡಿಗೆ ಮಾಂಗಲ್ಯ: ‘ಬಸ್ ನಿಲ್ದಾಣ ಹಾಗೂ ಬಸ್ ಗಳಲ್ಲಿ ಜನರು ಹೆಚ್ಚಿರುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಪ್ರಯಾಣಿಕರ ಜೇಬು ಕತ್ತರಿಸಿ ಕಳ್ಳತನ ಮಾಡುತ್ತಿದ್ದರು. ಕೆಲವು ಬಾರಿ, ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಅವರ ಬಳಿಯ ವಸ್ತುಗಳನ್ನು ಕದ್ದೊಯ್ಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಕಲಾಸಿಪಾಳ್ಯ, ಉಪ್ಪಾರಪೇಟೆ, ಹಲಸೂರು ಗೇಟ್ ಹಾಗೂ ಇತರೆ ಠಾಣೆಗಳ ವ್ಯಾಪ್ತಿಯಲ್ಲೂ ಆರೋಪಿಗಳು ಕೃತ್ಯ ಎಸಗಿದ್ದಾರೆ. ಆರೋಪಿಗಳು, ದೂರುದಾರರಿಂದ ಕದ್ದಿದ್ದ ಚಿನ್ನದ ಮಾಂಗಲ್ಯವನ್ನು ತಮಿಳುನಾಡಿನ ದೇವಸ್ಥಾನವೊಂದರ ಹುಂಡಿಗೆ ಹಾಕಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


