ಜೈಪುರ್: ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಗೆಳೆಯನ ಮುಂದೆಯೇ ಸಾಮೂಹಿಕ ಅತ್ಯಾಚಾರವೆಸಗಿದ್ದ ಮೂವರು ಆರೋಪಿಗಳನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಹಾಗೂ ಆಕೆಯ ಗೆಳೆಯ ಶನಿವಾರ ಅಜ್ಮೀರ್‍ನಿಂದ ರಾತ್ರಿ 10:30 ರ ಸುಮಾರಿಗೆ ಬಸ್ ನಲ್ಲಿ ಜೋಧ್ ಪುರಕ್ಕೆ ಬಂದಿದ್ದಾರೆ. ಬಳಿಕ ಉಳಿದುಕೊಳ್ಳಲು ರೂಮ್ ಪಡೆಯಲು ಅತಿಥಿ ಗೃಹಕ್ಕೆ ತೆರಳಿದ್ದರು. ಆದರೆ ಅಲ್ಲಿನ ಅತಿಥಿ ಗೃಹದ ಸಿಬ್ಬಂದಿ ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ನಂತರ ಅಲ್ಲಿಂದ ಇಬ್ಬರೂ ತೆರಳಿದ್ದಾರೆ. ಅತಿಥಿ ಗೃಹದ ಹೊರಗೆ ನಿಂತಿದ್ದ ಇಬ್ಬರನ್ನೂ ಮಾತಾಡಿಸಿದ ಆರೋಪಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಬಳಿಕ ರೈಲ್ವೇ ನಿಲ್ದಾಣಕ್ಕೆ ಕರೆದೊಯ್ಯುತ್ತಿರುವುದಾಗಿ ನಂಬಿಸಿ ಜೆಎನ್ ವಿಯು ಕ್ಯಾಂಪಸ್ ಬಳಿಯ ಕ್ರೀಡಾಂಗಣಕ್ಕೆ ಕಳುಹಿಸಿದ್ದಾರೆ. ಅಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅತಿಥಿಗೃಹದ ಮೇಲ್ವಿಚಾರಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗಿನ ಜಾವ ಮೈದಾನಕ್ಕೆ ಜನ ವಾಕಿಂಗ್ ಗೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ವೇಳೆ ಬಾಲಕಿಯ ಗೆಳೆಯ ವಾಯು ವಿಹಾರಕ್ಕೆ ತೆರಳಿದ್ದವರ ಬಳಿ ಸಹಾಯ ಕೇಳಿದ್ದಾನೆ. ನಂತರ ಅವರು ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಪೊಲೀಸರು ಶ್ವಾನ ದಳ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಂಡವನ್ನು ನಿಯೋಜಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳನ್ನು ಸಿಸಿಟಿವಿ ದೃಶ್ಯಗಳ ಸಹಾಯದಿಂದ ಜೋಧ್ ಪುರದ ಗಣೇಶಪುರದ ಮನೆಯೊಂದರಲ್ಲಿ ಅಡಗಿರುವುದನ್ನು ಖಚಿತ ಪಡಿಸಿಕೊಳ್ಳಲಾಯಿತು. ಬಂಧನಕ್ಕೆ ತೆರಳಿದ್ದ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಬಿದ್ದು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


