ತುಮಕೂರು: ಕೃತಕ ಬುದ್ಧಿಮತ್ತೆಯನ್ನು (ಎ.ಐ.) ಸಾಕಷ್ಟು ಎಚ್ಚರಿಕೆ, ಬುದ್ಧಿವಂತಿಕೆಯಿಂದ ಬಳಸಬೇಕಿದೆ ಎಂದು ಕಂಪ್ಯೂಟರ್ ತಜ್ಞ ಪ್ರೊ.ಕೆ.ಪಿ.ರಾವ್ ಸಲಹೆ ಮಾಡಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರೊ.ಕಮಲಾ ಹಂಪನಾ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.
ತಂತ್ರಜ್ಞಾನ ಕತ್ತಿಯ ಅಲಗಿನ ಹಾಗೆ. ಅದಕ್ಕೆ ಎರಡೂ ರೀತಿಯ ಬಳಕೆ ಗೊತ್ತಿದೆ. ನಾವು ಅದರ ಧನಾತ್ಮಕ ಆಯಾಮವನ್ನು ನೋಡಬೇಕು. ಕೃತಕ ಬುದ್ಧಿಮತ್ತೆ ಮಾನವ ಜನಾಂಗಕ್ಕೆ ವರವಾಗಿ ಪರಿಣಮಿಸುವಂತೆ ನೋಡಿಕೊಳ್ಳಬೇಕು. ಇದು ಮನುಷ್ಯನ ಉನ್ನತಿಗಾಗಿಯೇ ಹೊರತು, ಅವನತಿಗಾಗಿ ಅಲ್ಲ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಇಂಗ್ಲಿಷ್ ಭಾಷೆಯಲ್ಲಿ ಸಾಕಷ್ಟು ಕೆಲಸಗಳಾಗಿವೆ. ಕನ್ನಡವೂ ಸೇರಿದಂತೆ ಭಾರತದ ಸಾಕಷ್ಟು ಭಾಷೆಗಳಲ್ಲಿ ಆಗಿರುವ ಕೆಲಸ ಏನೇನೂ ಸಾಲದು. ಆ ಬಗ್ಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದರು.
ಶಾಂತ ಪರಿಸ್ಥಿತಿಯಲ್ಲಿ ಹೊಸತು ಅನ್ವೇಷಣೆ ಆಗುವುದಿಲ್ಲ. ಅದಕ್ಕೆ ಒಂದು ಬಗೆಯ ಸಂಘರ್ಷ ಬೇಕು. ಇದು ಮನುಷ್ಯನ ಸ್ವಭಾವ. ಆದರೆ ಕಂಪ್ಯೂಟರ್‌ಗೆ ಅಂತಹ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ, ‘ಭಾಷೆ ಇಲ್ಲದಿದ್ದರೆ ಜಗತ್ತು ಕತ್ತಲಲ್ಲಿ ಇರುತ್ತಿತ್ತು. ಭಾಷೆ ಇಲ್ಲದೆ ಜಗತ್ತು ಮುಂದುವರಿಯುತ್ತಿರಲಿಲ್ಲ. ಅದು ಎಲ್ಲ ಜ್ಞಾನಕ್ಕೂ ಮೂಲವಾಗಿದೆ. ನೆನಪಿಗಿಂತ ಮರೆವು ದೊಡ್ಡದು. ಹಾಗೆಂದು ವಿಸ್ಮೃತಿಗೆ ಜಾರಬಾರದು. ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ ಮರೆಯಬಾರದು’ ಎಂದು ತಿಳಿಹೇಳಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕಾರ್ಯಕ್ರಮ ಸಂಯೋಜಕಿ ಗೀತಾ ವಸಂತ, ಪ್ರಾಧ್ಯಾಪಕರಾದ ನಿತ್ಯಾನಂದ ಬಿ. ಶೆಟ್ಟಿ, ಅಣ್ಣಮ್ಮ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



