ರಾಜ್ಯದಲ್ಲಿ ಅಂಗಾಂಗ ದಾನ ಕುರಿತ ಜಾಗೃತಿಗೆ ರಾಯಭಾರಿಯಾಗುವಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಹ್ವಾನಿಸಿದ್ದಾರೆ. ರಾಜ್ಯದಲ್ಲಿ ದೊಡ್ಮನೆ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವುದನ್ನು ಗಮನಿಸಿರುವ ಸಚಿವರು, ಆರೋಗ್ಯ ಇಲಾಖೆಯ ವತಿಯಿಂದ ಅಗಸ್ಟ್ 3 ರಂದು ಆಚರಿಸುವ ಅಂಗಾಂಗ ದಾನ ದಿನಾಚರಣೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ.
ವರನಟ ಡಾ. ರಾಜಕುಮಾರ್ ಅವರಂತೆಯೇ ನಟ ಪುನೀತ್ ರಾಜ್ ಕುಮಾರ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳ ದಾನದಿಂದಾಗಿ ರಾಜ್ಯದಲ್ಲಿ ಸಾವಿರಾರು ಜನರಿಗೆ ಅಂಗಾಂಗ ದಾನ ಮಾಡಲು ಪ್ರೇರಣೆಯಾಗಿತ್ತು. ಅಲ್ಲದೇ ಅಂಗಾಂಗ ದಾನ ಪ್ರಮಾಣ ಏರಿಕೆ ಕೂಡಾ ಕಂಡಿತ್ತು. ಅನೇಕರು ದಿ. ಪುನೀತ್ ರಾಜ್ಕುಮಾರ್ ಅವರನ್ನೇ ಮಾದರಿಯಾಗಿ ಇಟ್ಟುಕೊಂಡು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.
ಹೀಗಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಅಂಗಾಂಗ ದಾನ ಜಾಗೃತಿಗೆ ರಾಯಭಾರಿಯಾಗುವಂತೆ ಆರೋಗ್ಯ ಇಲಾಖೆ ಆಹ್ವಾನ ನೀಡಿದೆ. ಅಂಗಾಂಗ ದಾನದ ಮೂಲಕ ಒಬ್ಬ ದಾನಿ ತನ್ನ ಸಾವಿನ ಬಳಿಕವೂ 8 ಜನರಿಗೆ ಜೀವದಾನ ಮಾಡಬಹುದಾಗಿದೆ. ಅಲ್ಲದೇ, ಅಂಗಾಂಗ ದಾನದ ಮೂಲಕ 50 ಜನರ ಜೀವವನ್ನು ಉಳಿಸಬಹುದಾಗಿದೆ.
ಜೀವನದ ಸಾರ್ಥಕತೆ ಕಾಣಬಹುದಾದ ಅಂಗಾಂಗ ದಾನಕ್ಕೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ನೀಡುವತ್ತ ಕಾರ್ಯಕ್ರಮಗಳನ್ನು ರೂಪಿಸಲು ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ. ಅಗಸ್ಟ್ 3 ರಂದು ಅಂಗಾಂಗ ದಾನ ದಿನಾಚರಣೆ ಆಚರಿಸುತ್ತಿರುವ ರಾಜ್ಯ ಆರೋಗ್ಯ ಇಲಾಖೆ, ಅಂಗಾಂಗ ದಾನ ಮಾಡಿದ ರಾಜ್ಯದ 150 ಕುಟುಂಬಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA