ಕೊರಟಗೆರೆ : ಭಾರತರತ್ನ, ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಬಿಜೆಪಿ ವತಿಯಿಂದ ಭಾವಪೂರ್ಣವಾಗಿ ಆಚರಿಸಲಾಯಿತು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಪಟ್ಟಣದ ಬಿಜೆಪಿ ಪಂಚಜನ್ಯ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಕೇಂದ್ರ ಸಚಿವ ಸೋಮಣ್ಣ, “ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಅಪರೂಪದ ನಾಯಕ. ರಾಜಕೀಯದಲ್ಲಿ ಶುದ್ಧತೆ, ಮಾತಿನಲ್ಲಿ ಸಂಯಮ ಹಾಗೂ ಆಡಳಿತದಲ್ಲಿ ದೃಢತೆ ಅವರ ವ್ಯಕ್ತಿತ್ವದ ಪ್ರಮುಖ ಲಕ್ಷಣಗಳಾಗಿದ್ದವು. ವಿರೋಧಿಗಳಿಂದಲೂ ಗೌರವ ಪಡೆದ ಮಹಾನ್ ರಾಜಕಾರಣಿ ಎಂದು ಸ್ಮರಿಸಿದರು.
ಸ್ವರ್ಣ ಚತುಷ್ಪಥ ಯೋಜನೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ಅಣುಶಕ್ತಿ ಪರೀಕ್ಷೆ ಮೂಲಕ ಭಾರತದ ಶಕ್ತಿ ಪ್ರದರ್ಶನ ಸೇರಿದಂತೆ ಅನೇಕ ಐತಿಹಾಸಿಕ ನಿರ್ಣಯಗಳನ್ನು ವಾಜಪೇಯಿ ಅವರು ಕೈಗೊಂಡರು,ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಅಟಲ್‌ಜಿ ಅವರ ದೂರದೃಷ್ಟಿಯೇ ಮೂಲ ಪ್ರೇರಣೆ ಎಂದು ಹೇಳಿದರು.
ರಾಜಕೀಯದಲ್ಲಿ ಸೌಜನ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿದ ವಾಜಪೇಯಿ ಅವರ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ರುದ್ರೇಶ್ ಮಾತನಾಡಿ, ನವ ಭಾರತ ನಿರ್ಮಾಣದ ನಿರ್ಮಾತೃ ವಾಜಪೇಯಿಯವರಾಗಿದ್ದು ಅವರ ಕಾರ್ಯವೈಖರಿ ಪ್ರತಿಯೊಬ್ಬ ರಾಜಕಾರಣಿಗೂ ಅನುಕರಣಿಯ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಿ.ಎಂ.ಕಾಮರಾಜು ಮಾತನಾಡಿ, ದೇಶದಲ್ಲಿ ಅಜಾತಶತ್ರುವಾಗಿ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ ಎಂದರೆ ಅದು ವಾಜಪೇಯಿ ಪ್ರತಿಯೊಬ್ಬ ರಾಜಕಾರಣಿಯು ಅವರ ಸ್ನೇಹ ಭಾವದ ನಡಿಯನ್ನು ರೂಡಿಸಿಕೊಂಡು ಪ್ರಗತಿಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ. ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯ ಕೆಎನ್ ಲಕ್ಷ್ಮೀನಾರಾಯಣ, ಮಾಜಿ ಪ.ಪಂ ಸದಸ್ಯ ಸುಶೀಲಮ್ಮ ಮುಖಂಡರಾದ ವಿಜಯಣ್ಣ, ವಿ.ಕೆ.ವೀರಕ್ಯಾತರಾಯ, ಕೊಡ್ಲಹಳ್ಳಿ ವೆಂಕಟೇಶ್, ಸೇರಿದಂತೆ ಬಿಜೆಪಿ–ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ವಾಜಪೇಯಿ ಅವರ ಜೀವನ ಸಾಧನೆಗಳನ್ನು ಸ್ಮರಿಸಿ ಎಲ್ಲರೂ ಗೌರವ ನಮನ ಸಲ್ಲಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


