ತುಮಕೂರಿನ ಪತ್ರಿಕಾ ಭವನದಲ್ಲಿ ಸರ್ಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಜಿಲ್ಲಾ ಸಮಾವೇಶ ರವಿವಾರ ಜರುಗಿತು.
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ತಿಂಗಳಿಗೆ ರೂ. 20,000 ಗೌರವಧನ ನೀಡುವಂತೆ ಹಾಗೂ ವಾರಕ್ಕೆ 10 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ನೀಡುತ್ತಿರುವುದನ್ನು ವಿರೋಧಿಸಿ ಈ ಸಮಾವೇಶ ಜರುಗಿತು.
ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪದವಿ ಪೂರ್ವ ಅತಿಥಿ ಉಪನ್ಯಾಸಕರು ಈ ಸಮಾವೇಶದಲ್ಲಿ ಭಾಗಿಯಾಗಿದ್ದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ದೊರೆರಾಜು ,ಪ್ರಗತಿಪರ ಚಿಂತಕರು ಹಾಗೂ ನಿವೃತ್ತ ಡಿಡಿಪಿಐ ಸಮಾವೇಶವನ್ನು ಕುರಿತು ಮಾತನಾಡಿ, ಇಂದು ಎಲ್ಲಾ ಸರ್ಕಾರಗಳು ಜನವಿರೋಧಿಯಾಗಿದ್ದು, ಅತಿಥಿ ಉಪನ್ಯಾಸಕರಿಗೆ ಯಾವುದೇ ರೀತಿಯ ನೆರವು ನೀಡುತ್ತಿಲ್ಲ.
ಉಪನ್ಯಾಸಕರು ಬೀದಿಗಿಳಿದೇ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಬೇಕಾದ ಸಂದರ್ಭ ಬಂದಿದೆ ಎಂದರು.
ಸರ್ಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಸಂಘಟನೆಯ ರಾಜ್ಯ ಸಲಹೆಗಾರರಾದ ವಿಎನ್ ರಾಜಶೇಖರ್ ಮಾತನಾಡಿ, ವಾರಕ್ಕೆ ಕೇವಲ 10 ಗಂಟೆಗಳು ಮಾತ್ರ ಕಾರ್ಯಭಾರ ನೀಡಬೇಕೆಂದು ಪದವಿ ಪೂರ್ವ ಇಲಾಖೆಯ ಸುತ್ತೋಲೆ ಇದ್ದರೂ, ಪದವಿ ಪೂರ್ವ ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 20 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ನೀಡುತ್ತಿರುವುದು ತುಮಕೂರಿನಲ್ಲಿ ಕಂಡು ಬಂದಿದೆ.
ಈ ಕೂಡಲೇ ಪದವಿ ಪೂರ್ವ ಇಲಾಖೆ ಹಾಗೂ ಸರ್ಕಾರ ಈ ಶೋಷಣೆಯನ್ನು ನಿಲ್ಲಿಸಬೇಕಾಗಿದೆ. ಅತಿಥಿ ಉಪನ್ಯಾಸಕರಿಗೆ ಕನಿಷ್ಠ 20,000 ರೂ ನೀಡಬೇಕಾಗಿದೆ”, ಎಂದು ಈ ಬೇಡಿಕೆಗಳನ್ನು ಇಟ್ಟು ಹೋರಾಟ ಮುಂದುವರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜೇಶ್ ಭಟ್, ರಾಜ್ಯ ಅಧ್ಯಕ್ಷರಾದ ಪದ್ಮಪ್ರಭ ಇಂದ್ರ , ರಾಜ್ಯ ಜಂಟಿ ಕಾರ್ಯದರ್ಶಿ ಎಸ್ಜಿ ನಾಗರತ್ನ, AICUTA(NR) ಅಖಿಲ ಭಾರತ ಅಧ್ಯಕ್ಷರಾದ ಸುನೀತಾ, ಮತ್ತು ಪ್ರಗತಿಪರ ಹೋರಾಟಗಾರರಾದ ನಾಗಣ್ಣ ಉಪಸ್ಥಿತರಿದ್ದರು.
ಇದೇ ಸಮಾವೇಶದಲ್ಲಿ ತುಮಕೂರು ಜಿಲ್ಲೆಯ ಪದವಿಪೂರ್ವ ಅತಿಥಿ ಉಪನ್ಯಾಸಕರ ಹೊಸ ಸಮಿತಿ ರಚನೆಯಾಯಿತು. ಜಿಲ್ಲಾ ಅಧ್ಯಕ್ಷರಾಗಿ ಸೋಮಶೇಖರ್, ಉಪಾಧ್ಯಕ್ಷರಾಗಿ ,ಭಾರತ ನಿತ್ಯಾನಂದ, ಜಿಲ್ಲಾ ಕಾರ್ಯದರ್ಶಿಯಾಗಿ ವಾಸು, ಖಜಾಂಚಿಯಾಗಿ ಕಾಂತರಾಜು ,ಜಂಟಿ ಕಾರ್ಯದರ್ಶಿಗಳು ಅನ್ಸರ ಅಹಮದ್ , ರಾಜೇಶ್ ಹಾಗೂ ಕಾರ್ಯಕಾರಿ ಸಮಿತಿಗೆ ಸೌಮ್ಯ ಶ್ವೇತಾ ಮಂಜುನಾಥ್ ಅಭಿಷೇಕ್ ಶಿವಕುಮಾರ್ ವೆಂಕಟೇಶ್ ಹರ್ಷಿತ ಹೇಮಂತ್ ಕುಮಾರ್ ಆಯ್ಕೆಯಾದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


