ಧಾರವಾಡ: ಬ್ಯಾಂಕ್ನ ಎಟಿಎಂನಿಂದ ಹಣ ಬಾರದೇ ಅಕೌಂಟನಿಂದ ಕಟ್ ಆಗಿದ್ದ 500 ರೂಪಾಯಿ ಹಿಂದುರಿಗಿಸದ ಬ್ಯಾಂಕ್ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಗ್ರಾಹಕನಿಗೆ 1,02,700 ರೂ.ಗಳ ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದೆ.
ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖೆಯ ಗ್ರಾಹಕರಾದ ವಕೀಲ ಸಿದ್ದೇಶ ಹೆಬ್ಬಳ್ಳಿ ನವೆಂಬರ್ 28, 2020 ರಂದು ತಮ್ಮ ಎಟಿಎಂ ಕಾರ್ಡನಿಂದ 500 ರೂ. ಹಣ ತಗೆಯಲು ಪ್ರಯತ್ನಿಸಿದಾಗ ತನ್ನ ಉಳಿತಾಯ ಖಾತೆಯಿಂದ ಡೆಬಿಟ್ ಆದರೂ ತನಗೆ ಆ ಹಣ ಬಾರದ ಕಾರಣ ಮತ್ತೊಮ್ಮೆ ಪಕ್ಕದ ಎಟಿಎಂ ಮಶೀನಿನಿಂದ ಕಾರ್ಡಹಾಕಿ 500 ರೂ.ಪಡೆದಿದ್ದರು. ಇಂಡಿಯನ್ ಓವರಸೀಸ್ ಬ್ಯಾಂಕಿನ ಎಟಿಎಂ ಕಾರ್ಡ್ನಿಂದ ಮೊದಲನೇ ಸಲ ತೆಗೆದ 500 ರೂ. ತನಗೆ ಬಂದಿಲ್ಲವಾದರೂ ತನ್ನ ಖಾತೆಯಿಂದ ಡೆಬಿಟ್ ಆಗಿರುವ ಕುರಿತು ಡಿಸೆಂಬರ್ 02, 2020 ರಂದು ತಮ್ಮ ಖಾತೆಯಿರುವ ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖಾ ವ್ಯವಸ್ತಾಪಕರಿಗೆ ದೂರು ಕೊಟ್ಟಿದ್ದರು.
ಆದರೆ, ಸಿದ್ದೇಶ ಹೆಬ್ಬಳ್ಳಿ ಅವರು ನೀಡಿದ ದೂರು ಕುರಿತು ಶಾಖಾ ವ್ಯವಸ್ಥಾಪಕರು ಯಾವುದೇ ಕ್ರಮ ಕೈಗೋಳ್ಳದೇ ಇದ್ದರಿಂದ, ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಬ್ಯಾಂಕಿನವರ ಮೇಲೆ ಕ್ರಮ ಕೈಗೊಳ್ಳುವಂತೆ ಧಾರವಾಡದ ಜಿಲ್ಲಾ ಗ್ರಾಹಕರ ಆಯೋಗಕ್ಕೆ ವಕೀಲರು ದೂರು ಸಲ್ಲಿಸಿದ್ದರು. ಆಯೋಗದ ಅಧ್ಯಕ್ಷ ಈಶಪ್ಪ ಕ.ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ ಮತ್ತು ಪಿಸಿ ಹಿರೇಮಠ ಅವರು ದೂರಿನ ಬಗ್ಗೆ ವಿಚಾರಣೆ ನಡೆಸಿದರು.
ಎಟಿಎಂ ಹಣ ನಿರಾಕರಣೆಯ ಪ್ರಸಂಗಗಳಲ್ಲಿ ಗ್ರಾಹಕರ ಖಾತೆ ಹೊಂದಿದ ಬ್ಯಾಂಕಿನವರು ಹಣ ನಿರಾಕರಣೆಯ ದಿನಾಂಕದಿಂದ 6 ದಿನದ ಒಳಗಾಗಿ ಹಣವನ್ನು ಅವರ ಖಾತೆಗೆ ಜಮಾ ಮಾಡಬೇಕು. ತಪ್ಪಿದಲ್ಲಿ 6 ದಿವಸದ ನಂತರ ದಿನ ಒಂದಕ್ಕೆ ರೂ.100 ರಂತೆ ವಿಳಂಬದ ಅವಧಿಗೆ ಗ್ರಾಹಕರಿಗೆ ಪರಿಹಾರ ಕೊಡಬೇಕು. ಇದು ರಿಸರ್ವ್ ಬ್ಯಾಂಕಿನ ನಿರ್ದೇಶನವಿದ್ದರೂ ಅದನ್ನು ಪಾಲಿಸದೇ ಧಾರವಾಡದ ಇಂಡಿಯನ್ ಓವರಸೀಸ್ ಬ್ಯಾಂಕಿನ ಶಾಖಾ ವ್ಯವಸ್ತಾಪಕರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆಂದು ತೀರ್ಪು ನೀಡಿದ್ದಾರೆ.
ದೂರುದಾರರಿಗೆ ನಿರಾಕರಣೆಯ 500 ರೂ.ಗಳು ಮತ್ತು ಅದಕ್ಕೆ ನವೆಂಬರ್ 28, 2020 ರಿಂದ ಶೇ.8 ರಂತೆ ಬಡ್ಡಿಯ ಜೊತೆ ರಿಸರ್ವ್ ಬ್ಯಾಂಕಿನ ಸುತ್ತೋಲೆಯಂತೆ ದಿನಕ್ಕೆ ರೂ.100 ರಂತೆ 677 ದಿವಸಗಳ ವಿಳಂಬಕ್ಕೆ 67,700 ರೂ. ಪರಿಹಾರ ನೀಡಬೇಕು.
ಅಷ್ಟೇ ಅಲ್ಲದೇ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ 25 ಸಾವಿರ ಪರಿಹಾರ ಹಾಗೂ 10 ಸಾವಿರ ಪ್ರಕರಣದ ಖರ್ಚು ವೆಚ್ಚ ಸೇರಿ 1,02,700 ರೂ. ನೀಡಬೇಕೆಂದು ಆಯೋಗ ತೀರ್ಪು ನೀಡಿದೆ. ಈ ತೀರ್ಪು ನೀಡಿದ 30 ದಿನದೊಳಗಾಗಿ ಸಂಬಂಧಿಸಿದ ಗ್ರಾಹಕರಿಗೆ ಹಣ ಪಾವತಿಸಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


