ಚಿತ್ರದುರ್ಗ: ಬಿಜೆಪಿಯು ವಾಮಮಾರ್ಗದಿಂದ ಸರ್ಕಾರ ರಚಿಸಿದ್ದು, ಇದೀಗ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯೂರು ತಾಲ್ಲೂಕಿನ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ.ಸಿ.ಪಾಪಣ್ಣ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭ ನಮ್ಮತುಮಕೂರು ಜೊತೆಗೆ ಮಾತನಾಡಿದ ಅವರು, ಬಿಜೆಪಿಯು ಎಂ ಎಲ್ ಎಗಳನ್ನು ಖರೀದಿಸುವ ಮೂಲಕ ವಾಮಮಾರ್ಗದಲ್ಲಿ ಸರ್ಕಾರ ರಚಿಸಿತು. 2008ರಲ್ಲಿಯೂ ವಾಮ ಮಾರ್ಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ 3 ಮುಖ್ಯಮಂತ್ರಿಗಳು ಆಡಳಿತ ನಡೆಸುವಂತಾಗಿತ್ತು ಎಂದರು.
ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಯವರು ಮಾಡಿರುವ ಸಾಧನೆ ಎಂದರೆ, ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋಗಿರುವುದು ಎಂದರು.
ಚುನಾವಣೆಗೆ ಹಣ ಹಾಕಿ ಅಧಿಕಾರ ಗಿಟ್ಟಿಸಿಕೊಳ್ಳುವುದು ಬಳಿಕ ವ್ಯಾಪಾರ ಮಾಡುವುದೇ ಬಿಜೆಪಿಯ ಉದ್ದೇಶವಾಗಿದೆ. ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು 40 % ಕಮಿಷನ್ ಕೇಳುವ ಮೂಲಕ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಕಾರಣರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಶ್ವರಪ್ಪನ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ಟಿ.ಬಿ.ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಸಂಚು ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, 3 ತಿಂಗಳಲ್ಲಿ ಈಶ್ವರಪ್ಪ ಆರೋಪ ಮುಕ್ತರಾಗಿ ಮತ್ತೆ ಸಚಿವ ಸ್ಥಾನ ಪಡೆದುಕೊಳ್ಳುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅಂದಿನ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದಲ್ಲೆ ಕರ್ನಾಟಕ ನಂ. 1 ಮೊದಲನೇಯ ಸ್ಥಾನ ಪಡೆದುಕೊಂಡಿತ್ತು. ಆದರೆ ಇಂದಿನ ಬಿ ಜೆ ಪಿ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರದಲ್ಲಿ ನಂ 1 ಸ್ಥಾನ ಪಡೆದುಕೊಂಡಿದೆ. ಬಿಜೆಪಿ ಲೂಟಿ ಮಾಡುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಪಂಡಿತ್ ಜವಾಹರ್ ಲಾಲ್ ನೆಹರು, ಮೌಲಾನ್ ಆಜಾದ್ , ಸರದಾರ್ ವಲ್ಲಬಾಯಿ ಪಾಟೇಲ್ , ಇವರುಗಳ ನೇತೃತ್ವದಲ್ಲಿ ಬಂದಂತಹ H A L, H M T, AIR INDIA ಗಳನ್ನು ಮಾರಾಟ ಮಾಡಿದ್ದು, ರಾಷ್ಟ್ರೀಯ ಬ್ಯಾಂಕ್ ಗಳನ್ನು ಖಾಸಗಿಕರಣ ಮಾಡುತ್ತಿರುವುದು ಬಿಜೆಪಿಯ ಸಾಧನೆಯಾಗಿದೆ. 148 ಸ್ವತಂತ್ರ ರಾಷ್ಟ್ರಗಳಲ್ಲಿ ಇವಿಎಂ ಬಳಕೆ ಮಾಡುತ್ತಿರುವುದು ಭಾರತ ಸೇರಿದಂತೆ ಕೇವಲ 3 ದೇಶಗಳಲ್ಲಿ ಮಾತ್ರ. ಜಪಾನ್ ನಂತಹ ಮುಂದುವರಿದ ದೇಶ, ಇಸ್ರೆಲ್ ನಂತಹ ದೇಶಗಳು ಇಂದಿಗೂ ಬ್ಯಾಲೆಟ್ ಸಿಸ್ಟಮ್ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.
ಇಂದಿನ ತಂತ್ರಜ್ಞಾನ ಕಾಲದಲ್ಲಿ ಎಟಿಎಂನಿಂದಲೇ ವಿವಿಧ ಮಾರ್ಗಗಳನ್ನು ಬಳಸಿ ಹಣ ಕದಿಯುತ್ತಾರೆ. ಅಂತಹದ್ದರಲ್ಲಿ, ಇವಿಎಂ ಮೆಷಿನ್ ಹ್ಯಾಕ್ ಮಾಡುವುದು ಅಷ್ಟು ಕಷ್ಟಕರ ಕೆಲಸವೇ ಎಂದು ಅವರು ಪ್ರಶ್ನಿಸಿದರು.
ಡಿ.ಸುಧಾಕರ್ ಗೆ ಟಿಕೆಟ್ ಕೈ ತಪ್ಪುತ್ತಾ?
ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಮನೆಯೊಂದು ಎರಡು ಬಾಗಿಲು ಎನ್ನುವಂತಾಗಿದೆ. ಮಾಜಿ ಸಚಿವ ಸುಧಾಕರ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪುತ್ತಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಟಿ.ಬಿ.ಜಯಚಂದ್ರ, ರಾಜಕೀಯ ಪಕ್ಷದಲ್ಲಿ ಹೊಸ ಮುಖಗಳು ಬರುತ್ತಾ ಇರುತ್ತವೆ, ಹಳೆಯ ಮುಖ ಬದಲಾಗುತ್ತಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸೋಮಶೇಖರ್ ಬಿ., ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸಿ.ಬಿ.ಪಾಪಣ್ಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಆರ್ ರಾಮಕೃಷ್ಣಪ್ಪ, ಬಿ.ಸಿ.ಜಯಣ್ಣ, ಈಶ್ವರಪ್ಪ, ಶಶಿಕುಮಾರ್ ದಿಂಡಾವರ , ನರಸಿಂಹಮೂರ್ತಿ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ನರಸಿಂಹಮೂರ್ತಿ, ಜವನಗೊಂಡನಹಳ್ಳಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷರಾದ ಎಮ್.ಎಸ್.ಗೌರಿ ಮುರುಳಿಧರನ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


