ಸರಗೂರು: ತಾಲ್ಲೂಕಿನ ಹೆಗ್ಗನೂರು ಗ್ರಾಪಂ ವ್ಯಾಪ್ತಿಯ ದೇವಲಾಪುರ ಗ್ರಾಮದಲ್ಲಿ ಮಂಗಳವಾರ ದಂದು ರಾತ್ರಿ ದಾಳಿ ನಡೆಸಿರುವ ಕಾಡಾನೆಗಳು ರೈತರ ಬಾಳೆ ತೋಟವನ್ನು ತುಳಿದು ನಾಶ ಮಾಡಿವೆ.
ದೇವಲಾಪುರ ಗ್ರಾಮದ ರವಿಶ್ ಅವರ ಎರಡು ಎಕರೆ ಬಾಳೆ ತೋಟಗಳಲ್ಲಿ ನಾಲ್ಕು ಕಾಡಾನೆಗಳು ಸಂಚರಿಸಿ ಬಾಳೆಗಿಡಗಳನ್ನು ತಿಂದು ನಾಶ ಮಾಡಿವೆ. ತೋಟಗಳಲ್ಲಿಯೇ ಲದ್ದಿ ಹಾಕಿ ಹೋಗಿವೆ. ಕಳೆದ ಕೆಲವು ದಿನಗಳ ಹಿಂದೆಯೂ ಈಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಮತ್ತೆ ಕಾಡಾನೆ ದಾಳಿ ಗ್ರಾಮದಲ್ಲಿ ಮುಂದುವರೆದಿದ್ದು ಗ್ರಾಮಸ್ಥರು ಬೆಳೆ ಕಳೆದುಕೊಂಡು ಅನುಭವಿಸುವಂತಾಗಿದೆ .
ಇನ್ನು 15 ದಿನದಲ್ಲಿ ಕಟಾವಿಗೆ ಬಂದಿದ್ದ 1,500 ಬಾಳೆ ಗಿಡಗಳನ್ನು ಕಾಡಾನೆಗಳು ನಾಶ ಮಾಡಿವೆ. ಘಟನೆಯಿಂದ ಸುಮಾರು ₹5 ಲಕ್ಷದಷ್ಟು ನಷ್ಟವಾಗಿದೆ ಎಂದು ರೈತ ರವಿಶ್ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಐದಾರು ಆನೆಗಳ ಹಿಂಡಿದ್ದು ಎರಡು ಆನೆ ಮಾತ್ರ ತೋಟಕ್ಕೆ ನುಗ್ಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು
ಗ್ರಾಮೀಣ ಭಾಗದ ದೇವಲಾಪುರ ಹುಲ್ಲೇಮಾಳ, ಹೆಗ್ಗನೂರು ಮತ್ತಿತರ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳವಿದೆ. ಹಳ್ಳಿಗಳಿಗೆ ಆಹಾರ ಹುಡುಕಿಕೊಂಡು ಕಾಡಾನೆಗಳು ಊರಿಗೆ ಬರುತ್ತಿದ್ದು ಬೆಳೆ ಹಾನಿ ಮಾಡುತ್ತಿವೆ. ಹಲವು ಕಡೆ ಕಾಡಾನೆ ಸಂಚಾರದಿಂದ ಗ್ರಾಮಸ್ಥರು ತೋಟದ ಕಾರ್ಮಿಕರು, ಶಾಲಾ ಮಕ್ಕಳು ಭಯ ಪಡುವಂತಾಗಿದೆ. ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗೆ ಓಡಿಸುವುದರ ಮುಖಾಂತರ ಅಥವಾ ಸ್ಥಳಾಂತರ ಮಾಡುವ ಮುಖಾಂತರ ಶಾಶ್ವತ ಪರಿಹಾರ ಒದಗಿಸಿ ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


